ಕರ್ನಾಟಕ

karnataka

ETV Bharat / bharat

ವಾಯು ಮಾಲಿನ್ಯ ರಾಷ್ಟ್ರೀಯ ತುರ್ತು ಪರಿಸ್ಥಿತಿ, ಸಂಸತ್ತಿನಲ್ಲಿ ಚರ್ಚೆಯಾಗಲಿ: ರಾಹುಲ್ ಗಾಂಧಿ - AIR POLLUTION

ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಾಯು ಮಾಲಿನ್ಯ
ವಾಯು ಮಾಲಿನ್ಯ (IANS)

By PTI

Published : Nov 22, 2024, 4:11 PM IST

ನವದೆಹಲಿ: ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ಪ್ರತಿಪಾದಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಂಬರುವ ಸಂಸತ್ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಈ ಬಿಕ್ಕಟ್ಟನ್ನು ಶಾಶ್ವತವಾಗಿ ಹೇಗೆ ಕೊನೆಗೊಳಿಸಬಹುದು ಎಂಬುದರ ಕುರಿತು ಚರ್ಚಿಸುವಂತೆ ಸಂಸದರನ್ನು ಒತ್ತಾಯಿಸಿದರು. ವಾಯುಮಾಲಿನ್ಯ ಬಿಕ್ಕಟ್ಟಿಗೆ ಸಾಮೂಹಿಕ ರಾಷ್ಟ್ರೀಯ ಪ್ರತಿಕ್ರಿಯೆಯ ಅಗತ್ಯವಿದೆಯೇ ಹೊರತು ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲ ಎಂದು ಅವರು ಹೇಳಿದರು.

ಇಲ್ಲಿನ ಇಂಡಿಯಾ ಗೇಟ್​ನಲ್ಲಿ ಪರಿಸರವಾದಿ ವಿಮ್ಲೇಂದು ಝಾ ಅವರೊಂದಿಗೆ ವಾಯುಮಾಲಿನ್ಯ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿರುವ ವಿಡಿಯೋವನ್ನು ರಾಹುಲ್ ಗಾಂಧಿ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದೊಂದಿಗೆ ತಮ್ಮ ಪೋಸ್ಟ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್, ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತುಸ್ಥಿತಿಯಾಗಿದೆ. ಇದು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರುವ, ವೃದ್ಧರನ್ನು ಉಸಿರುಗಟ್ಟಿಸುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಅಸಂಖ್ಯಾತ ಜೀವಗಳನ್ನು ಹಾಳುಮಾಡುವ ಪರಿಸರ ಮತ್ತು ಆರ್ಥಿಕ ವಿಪತ್ತಾಗಿದೆ ಎಂದು ಬರೆದಿದ್ದಾರೆ.

ಶುದ್ಧ ಗಾಳಿಗಾಗಿ ಜನರ ಪರದಾಟ:"ಈ ವಿಷಗಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬಡವರು ಅತಿಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ಕುಟುಂಬಗಳು ಶುದ್ಧ ಗಾಳಿಗಾಗಿ ಪರದಾಡುತ್ತಿವೆ, ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಲಕ್ಷಾಂತರ ಜನ ಸಾಯುತ್ತಿದ್ದಾರೆ. ಪ್ರವಾಸೋದ್ಯಮ ಹಾಳಾಗುತ್ತಿದೆ ಮತ್ತು ನಮ್ಮ ಜಾಗತಿಕ ಖ್ಯಾತಿಯು ಕುಸಿಯುತ್ತಿದೆ" ಎಂದು ರಾಹುಲ್ ಹೇಳಿದರು.

ಇದು ರಾಜಕೀಯ ಕೆಸರೆರಚಾಟ ಅಲ್ಲ:"ನೂರಾರು ಕಿಲೋಮೀಟರ್​ಗಳಷ್ಟು ದೂರದವರೆಗೆ ಮಾಲಿನ್ಯದ ಮೋಡ ಆವರಿಸಿದೆ. ಇದನ್ನು ಸ್ವಚ್ಛಗೊಳಿಸಲು ಸರ್ಕಾರಗಳು, ಕಂಪನಿಗಳು, ತಜ್ಞರು ಮತ್ತು ನಾಗರಿಕರಿಂದ ಪ್ರಮುಖ ಬದಲಾವಣೆಗಳು ಮತ್ತು ನಿರ್ಣಾಯಕ ಕ್ರಮದ ಅಗತ್ಯವಿದೆ. ನಮಗೆ ಸಾಮೂಹಿಕ ರಾಷ್ಟ್ರೀಯ ಪ್ರತಿಕ್ರಿಯೆ ಬೇಕು, ರಾಜಕೀಯ ಕೆಸರೆರಚಾಟ ಅಲ್ಲ" ಎಂದು ಅವರು ಹೇಳಿದರು.

ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಬೇಕು: "ಭಾರತವು ಈ ಬಿಕ್ಕಟ್ಟನ್ನು ಶಾಶ್ವತವಾಗಿ ಹೇಗೆ ಕೊನೆಗೊಳಿಸಬಹುದು ಎಂಬುದನ್ನು ಚರ್ಚಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಗಾಂಧಿ ತಿಳಿಸಿದರು. ವೀಡಿಯೊದಲ್ಲಿ ವಾಯುಮಾಲಿನ್ಯ ಬಿಕ್ಕಟ್ಟಿಗೆ ಕಾರಣಗಳೇನು ಎಂದು ರಾಹುಲ್ ಝಾ ಅವರಿಗೆ ಕೇಳುತ್ತಾರೆ. ಇದಕ್ಕುತ್ತರಿಸಿದ ಅವರು, ಇದು ಪ್ಯಾನ್ ಇಂಡಿಯಾ ಸಮಸ್ಯೆಯಾಗಿದೆ ಮತ್ತು ಎನ್​​ಸಿಆರ್​ನಲ್ಲಿ ಎಪಿಸೋಡಿಕ್ ಮೂಲಗಳು ಮತ್ತು ಶಾಶ್ವತ ಮೂಲಗಳಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ಹೇಳುತ್ತಾರೆ. ಕೃಷಿ ತ್ಯಾಜ್ಯ ಸುಡುವಿಕೆ ಕೂಡ ಪ್ರಮುಖ ಕಾರಣವಾಗಿದ್ದರೂ ಇದು ಮೂರು ವಾರಗಳವರೆಗೆ ಮಾತ್ರ ನಡೆಯುತ್ತದೆ. ಇದನ್ನು ತಡೆಯಲು ರೈತರಿಗೆ ಪ್ರೋತ್ಸಾಹಿಸುವುದು ಅಗತ್ಯ ಎಂದು ಝಾ ಹೇಳಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಗೆಲ್ಲುವ ಯಾವುದೇ ಮೈತ್ರಿಕೂಟಕ್ಕೆ ನಮ್ಮ ಬೆಂಬಲ: ಪ್ರಕಾಶ್ ಅಂಬೇಡ್ಕರ್ ಅಚ್ಚರಿಯ ಹೇಳಿಕೆ

ABOUT THE AUTHOR

...view details