ಗುವಾಹಟಿ(ಅಸ್ಸಾಂ): ಲೋಕೋ ಪೈಲಟ್‌ಗಳು ಕೃತಕ ಬುದ್ಧಿಮತ್ತೆ (ಎಐ) ಆಧರಿತ ವ್ಯವಸ್ಥೆಯ ಸಹಾಯದಿಂದ ಕಾಡಾನೆಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದಾರೆ. ಈಶಾನ್ಯ ಗಡಿ ರೈಲ್ವೇಯ (ಎನ್‌ಎಫ್‌ಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಪಿಂಜಲ್ ಶರ್ಮಾ ಗುರುವಾರ ಈ ವಿಷಯ ತಿಳಿಸಿದ್ದು, ಮರಿಗಳೂ ಸೇರಿದಂತೆ ಕನಿಷ್ಠ 60 ಆನೆಗಳು ಹಿಂಡಿನಲ್ಲಿದ್ದವು ಎಂದು ತಿಳಿಸಿದ್ದಾರೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಲುಮ್‌ಡಿಂಗ್‌ಗೆ ತೆರಳುತ್ತಿದ್ದ ಕಾಮ್ರೂಪ್ ಎಕ್ಸ್‌ಪ್ರೆಸ್ ರೈಲು ಲಮ್ಸಾಖಾಂಗ್ ನಿಲ್ದಾಣಕ್ಕೆ ತಲುಪುತ್ತಿದ್ದಾಗ ಈ ಘಟನೆ ನಡೆದಿದೆ. "ಆನೆಗಳ ಹಿಂಡು ಹಬೈಪುರ್ ಮತ್ತು ಲಮ್ಸಾಖಾಂಗ್ ನಿಲ್ದಾಣದ ನಡುವೆ ರೈಲು ಹಳಿಗಳನ್ನು ದಾಟುತ್ತಿದ್ದವು. ಇದನ್ನು ಗಮನಿಸಿದ ಲೋಕೋ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರು" ಎಂದು ಶರ್ಮಾ ಮಾಹಿತಿ ನೀಡಿದರು.
ಐಡಿಎಸ್ ಮೂಲಕ ಪೈಲಟ್‌ಗಳಿಗೆ ಎಚ್ಚರಿಕೆ: ಆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಇಂಟ್ರುಷನ್ ಡಿಟೆಕ್ಟಿವ್ ಸಿಸ್ಟಮ್) ಮೂಲಕ ರೈಲಿನ ಲೋಕೋ ಪೈಲಟ್‌ಗಳಿಗೆ ಎಚ್ಚರಿಕೆ ನೀಡಲಾಯಿತು ಎಂದರು.