ರಾಯ್‌ಪುರ(ಛತ್ತೀಸ್‌ಗಢ):ಪಡ್ಡೆ ಹುಡುಗರ ಮನಸು ಕದ್ದ ಚೆಲುವೆ, ನಟಿ ಸನ್ನಿ ಲಿಯೋನ್ ಅವರ ಹೆಸರಿನಲ್ಲಿ ಛತ್ತೀಸ್‌ಗಢ ಸರ್ಕಾರದ 'ಮಹಿಳಾ ವಂದನಾ ಯೋಜನೆ'ಯಡಿ ಮಾಸಿಕವಾಗಿ ನೀಡಲಾಗುವ 1 ಸಾವಿರ ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿರುವ ಪ್ರಕರಣ ಬಯಲಾಗಿದೆ.
ಈ ಅಕ್ರಮವನ್ನು ಕಾಂಗ್ರೆಸ್ ಬಯಲಿಗೆ ತಂದಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜೈವರ್ಧನ್ ಬಾಘೆಲ್ ಅವರು ಭಾನುವಾರ ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಹಿಳೆಯರಿಗಾಗಿ ಇರುವ ಮಹತರಿ ವಂದನಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಖಾತೆ ತೆರೆದು ಹಣ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಛತ್ತೀಸ್‌ಗಢ ಸರ್ಕಾರವು ಪ್ರತಿ ತಿಂಗಳು ಸನ್ನಿ ಲಿಯೋನ್‌ಗೆ 1,000 ರೂಪಾಯಿಗಳನ್ನು ನೀಡುತ್ತಿದೆ. ಈ ಪ್ರಕರಣವು ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತದೆ ಎಂದು ದೂರಿದ್ದಾರೆ. ಜೊತೆಗೆ, ಸನ್ನಿ ಲಿಯೋನ್ ಹೆಸರಿನ ಖಾತೆ ಮತ್ತು ಅದಕ್ಕೆ ಪ್ರತಿ ತಿಂಗಳು ವರ್ಗಾವಣೆಯಾದ ಮೊತ್ತವುಳ್ಳ ದಾಖಲೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.