ಧನ್ಬಾದ್(ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಾರ್ಖಂಡ್ನಲ್ಲಿ ಲೋಕಸಭಾ ಚುನಾವಣೆಯ ಕಹಳೆ ಮೊಳಗಿಸಿದರು. "ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 400 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮೋದಿ ಗ್ಯಾರಂಟಿ ಮೇಲೆ ದೇಶ ವಿಶ್ವಾಸ ಹೊಂದಿದೆ" ಎಂದರು.
ಧನ್ಬಾದ್ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶ ಉದ್ದೇಶಿಸಿದ ಮಾತನಾಡಿದ ಅವರು, ''ಮೋದಿ ಗ್ಯಾರಂಟಿ ಮೇಲೆ ದೇಶ ವಿಶ್ವಾಸ ಹೊಂದಿರುವ ಕಾರಣ ಎಲ್ಲೆಡೆಯೂ '400 ಮೀರಲಿದೆ' ಎಂಬ ಘೋಷಣೆ ಕೇಳಿ ಬರುತ್ತಿದೆ. ಯಾವಾಗ ಇತರರ ಎಲ್ಲ ಭರವಸೆಗಳು ಕೊನೆಗಾಣುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತದೆ'' ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ''ಅವರೆಲ್ಲರೂ ದೇಶದಲ್ಲಿ ಸಕಾರಾತ್ಮಕ ಅಭಿವೃದ್ಧಿಯ ವಿರೋಧಿಗಳು, ಜನ ವಿರೋಧಿಗಳು'' ಎಂದು ಟೀಕಿಸಿದರು.
''ಉತ್ತರ ಕರಣ್ಪುರ್ನಲ್ಲಿ ವಿದ್ಯುತ್ ಸ್ಥಾವರ ಘಟಕಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ಮಾಡಿದ್ದರು. ಇವರ ನಂತರ ಅಧಿಕಾರಕ್ಕೆ ಕಾಂಗ್ರೆಸ್ನ ಹಗರಣಗಳ ಸರ್ಕಾರ ಈ ಯೋಜನೆಯನ್ನೇ ಮುಚ್ಚಿಹಾಕಿತ್ತು. 2014ರಲ್ಲಿ ನಾನು ಈ ಯೋಜನೆಯ ಪುನರುಜ್ಜೀವನದ ಬಗ್ಗೆ ಗ್ಯಾರಂಟಿ ನೀಡಿದ್ದೆ. ಇಂದು ಈ ಘಟಕದ ಕಾರಣದಿಂದ ಅನೇಕ ಸಂಖ್ಯೆಯ ಮನೆಗಳು ಬೆಳಕು ಕಾಣುತ್ತಿವೆ'' ಎಂದು ಹೇಳಿದರು.