ನವದೆಹಲಿ:I.N.D.I.A ಕೂಟದ ಸದಸ್ಯ ಪಕ್ಷಗಳಾದ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಹರಿಯಾಣ ವಿಧಾನಸಭೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಿ ಪರಸ್ಪರ ಎದುರಾಳಿಯಾಗಿ ಕಣಕ್ಕಿಳಿದಿದ್ದವು. ಇದರಿಂದ ಎರಡೂ ಪಕ್ಷಗಳು ನಷ್ಟ ಅನುಭವಿಸಿವೆ. ಆಪ್ 'ಶೂನ್ಯ' ಸಾಧನೆ ಮಾಡಿದರೆ, ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಆಘಾತಕಾರಿ ಫಲಿತಾಂಶ ಅನುಭವಿಸಿತು. ಇದು ಮುಂಬರುವ ರಾಜ್ಯ ಚುನಾವಣೆ ಮತ್ತು ಮೈತ್ರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ಮತ್ತು ಜಾರ್ಖಂಡ್, ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಆಪ್ ಹಿಂದೇಟು ಹಾಕುವ ಸಾಧ್ಯತೆ ಇದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಗೆ ಮುಂದಾದರೂ, ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸದಿಂದಾಗಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷಕ್ಕೆ ಸೀಟು ಬಿಟ್ಟುಕೊಡಲು ಚೌಕಾಸಿ ನಡೆಸಿತು. ಪಕ್ಷದ ಶಕ್ತಿಯನ್ನೂ ಕಡೆಗಣಿಸಲಾಯಿತು. ಇದು ಆಪ್ನ ಅಸಮಾಧಾನಕ್ಕೆ ಕಾರಣವಾಯಿತು.
ದೆಹಲಿಯಲ್ಲಿ ಏಕಾಂಗಿ ಹೋರಾಟ:ಈ ಬಗ್ಗೆ ಆಮ್ ಆದ್ಮಿ ಪಕ್ಷದ ವಕ್ತಾರರಾದ ಪ್ರಿಯಾಂಕಾ ಕಕ್ಕರ್ ಹೇಳಿಕೆ ನೀಡಿದ್ದು, "ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅತಿಯಾದ ಆತ್ಮವಿಶ್ವಾಸಭರಿತ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ" ಎಂದು ಹೇಳಿದ್ದಾರೆ.