ನವದೆಹಲಿ:ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ರಾಷ್ಟ್ರಪತಿಗಳ ಅನುಮೋದನೆ ಪಡೆದ ಐವರು ಶಾಸಕರಾದ ಕೈಲಾಶ್ ಗೆಹ್ಲೋಟ್, ಗೋಪಾಲ್ ರೈ, ಸೌರಭ್ ಭಾರಧ್ವಾಜ್, ಇಮ್ರಾನ್ ಹುಸೇನ್, ಮುಖೇಶ್ ಅಹ್ಲಾವತ್ ಕ್ಯಾಬಿನೆಟ್ ಸಚಿವರಾಗಿ ಪ್ರತಿಜ್ಞಾವಿಧಿ ಪಡೆದರು.
ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ತಮ್ಮ ನಿವಾಸದಲ್ಲಿ ನೂತನ ಸಿಎಂ ಅತಿಶಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಸರಳವಾಗಿ ನೆರವೇರಿತು. ದೆಹಲಿ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.
ಅಬಕಾರಿ ಹಗರಣದಲ್ಲಿ ಆರೋಪ ಹೊತ್ತಿರುವ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಬಳಿಕ ಅತಿಶಿ ಅವರನ್ನು ಆಗಿ ಆಮ್ ಆದ್ಮಿ ಪಕ್ಷದ ಶಾಸಕಾಂಗದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರು ಮೌನಕ್ಕೆ ಜಾರಿದ್ದು, ಅತಿಶಿ ಅವರ ಪದಗ್ರಹಣ ಸಮಾರಂಭ ಕೂಡ ಅತ್ಯಂತ ಸರಳವಾಗಿ ನಡೆಯಿತು.
ಸಚಿವ ಸ್ಥಾನದಿಂದ ಮುಖ್ಯಮಂತ್ರಿ:ದೆಹಲಿ ಅಬಕಾರಿ ಹಗರಣದಲ್ಲಿ ಆರೋಪಿತರಾಗಿ ಸಿಬಿಐ ಬಂಧನಕ್ಕೆ ಒಳಗಾದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆಯ ನಂತರ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಅತಿಶಿ ಅವರನ್ನು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ನೇಮಿಸಿದ್ದರು. 2023 ರ ಮಾರ್ಚ್ನಲ್ಲಿ ಅತಿಶಿ ಮಂತ್ರಿಯಾದರು. ಅತಿಶಿ ಅವರು ಒಂದೇ ವರ್ಷದ ಅವಧಿಯಲ್ಲಿ ಸಚಿವರಾಗಿ ಬಳಿಕ ಮುಖ್ಯಮಂತ್ರಿಯಾಗಿ ಪದೋನ್ನತಿ ಪಡೆದುಕೊಂಡಂತಾಗಿದೆ.
ಸಂಭ್ರಮಾಚರಣೆ ಮಾಡದಂತೆ ಮನವಿ:ಅತಿಶಿ ಅವರು ದೆಹಲಿ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿದರೂ, ಸಂಭ್ರಮಾಚರಣೆ ನಡೆಸದಂತೆ ಆಪ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು. ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ದಿನವೇ ಅವರು ಈ ನಿರ್ಧಾರ ಪ್ರಕಟಿಸಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿರುವುದು ಬೇಸರ ತಂದಿದೆ. ಇದು ಸಂಭ್ರಮಿಸುವ ಸಮಯವಲ್ಲ ಎಂದು ಹೇಳಿದ್ದರು.