ಹೈದರಾಬಾದ್;ಅಲ್ಲು ಅರ್ಜುನ್ ಬಂಧನ ಮತ್ತು ಜಾಮೀನಿನ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಅಲ್ಲು ಅರ್ಜುನ್ ತಮ್ಮಷ್ಟಕ್ಕೆ ತಾವು ಬಂದು ಸಿನಿಮಾ ನೋಡಿ ಹೋಗಿದ್ದರೆ ಇಷ್ಟೊಂದು ಗಲಾಟೆ ಆಗುತ್ತಿರಲಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಅಲ್ಲು ಅರ್ಜುನ್ ಬಂಧನದ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಸಾಮಾನ್ಯ ಪ್ರಜೆಯಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರಿಗೂ ಒಂದೇ. ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ ಎಂದು ಸಿಎಂ ರೇವಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. 'ಪುಷ್ಪ-2' ಬಿಡುಗಡೆ ಸಂದರ್ಭದಲ್ಲಿ ಬೆನಿಫಿಟ್ ಶೋ ಜೊತೆಗೆ ಟಿಕೆಟ್ ದರ ಏರಿಕೆಗೂ ಎಸ್ ಎಂದಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಬೆನಿಫಿಟ್ ಶೋಗೆ ಅನುಮತಿ ಇಲ್ಲದೆಯೇ ಸಿನಿಮಾ ಮಂದಿರಕ್ಕೆ ಆಗಮಿಸಿದ್ದರು ಎಂದು ಸಿಎಂ ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ ಥೇಟರ್ಗೆ ಕಾರಿನಲ್ಲಿ ಆಗಮಿಸಿದ ಅವರು ಕಾರಿನಿಂದ ಇಳಿದು ರ‍್ಯಾಲಿ ತರಹ ನಡೆದಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದರಿಂದ ಕಾಲ್ತುಳಿತ ಆಗಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೃತ ಮಹಿಳೆಯ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಘಟನೆಯ ಮಾಹಿತಿ ನೀಡಿದರು.
“ಸಿನಿಮಾ ತಾರೆ, ರಾಜಕೀಯ ನೇತಾರ ಎಂಬುದನ್ನು ನಮ್ಮ ಸರ್ಕಾರ ನೋಡುವುದಿಲ್ಲ. ಘಟನೆ ಏನು, ಆರೋಪಗಳೇನು ಎಂಬುದನ್ನು ಮಾತ್ರವೇ ನಾವು ನೋಡುತ್ತೇವೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ?. ನೀವು ಪ್ರೇಕ್ಷಕರೊಂದಿಗೆ ಸಿನಿಮಾ ನೋಡಬೇಕು ಎಂಬುದೇ ಆಗಿದ್ದರೆ, ಈ ವಿಚಾರವನ್ನು ಪೊಲೀಸರಿಗೆ ಮೊದಲೇ ತಿಳಿಸಬೇಕಿತ್ತು ಹಾಗೂ ಅವರಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗಿತ್ತು ಎಂದು ರೇವಂತ ರೆಡ್ಡಿ ಹೇಳಿದ್ದಾರೆ.
ಅಲ್ಲು ಅರ್ಜುನ್ ತಮಗೆ ಬಾಲ್ಯದಿಂದಲೂ ಗೊತ್ತು, ಉದ್ದೇಶಪೂರ್ವಕವಾಗಿ ಅವರನ್ನು ಏಕೆ ಬಂಧಿಸುತ್ತೇವೆ ನೀವೇ ಹೇಳಿ ಎಂದು ಪ್ರಶ್ನಿಸಿರುವ ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಅವರ ಸಂಬಂಧಿಗಳಾಗಿರುವ ಚಿರಂಜೀವಿ ಕಾಂಗ್ರೆಸ್ ನಾಯಕರಾಗಿದ್ದು, ಅವರ ಇನ್ನೊಬ್ಬ ಸಂಬಂಧಿಗಳಾದ ಚಂದ್ರಶೇಖರ್ ರೆಡ್ಡಿ ಕೂಡ ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಇದೇ ವೇಳೆ ಸಿಎಂ ನೆನಪು ಮಾಡಿಕೊಟ್ಟರು. ಪೊಲೀಸರು ಕಾನೂನು ಸುವ್ಯವಸ್ಥೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.