ಅಮೃತಸರ(ಪಂಜಾಬ್): ಅಮೃತಸರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಪ್ರೀತಿಯ ನಾಯಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
20 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಮೆಹಕ್ ರಜಪೂತ್ ವಾರ್ಡ್ ನಂ.38ಕ್ಕೆ ನಾಯಿಯ ನಾಮಪತ್ರ ಸಲ್ಲಿಸಿದ್ದಾರೆ. ಪ್ರೀತಿಯಿಂದ 'ಜಿಮ್ಮಿ' ಎಂದು ಕರೆಯುವ ನಾಯಿಯೊಂದಿಗೆ ಅಮೃತಸರದ ಎಸ್‌ಡಿಎಂ-1 ಕಚೇರಿಗೆ ಆಗಮಿಸಿದ ಮೆಹಕ್, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಕಳೆದ 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪಕ್ಷದ ವತಿಯಿಂದ ಸಾಕಷ್ಟು ಸಮಾಜ ಸೇವೆ ಮಾಡಿದ್ದೇನೆ. ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಈ ಬಾರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡದ ಕಾರಣ ನಿಯತ್ತಿಗೆ ಹೆಸರಾದ ನಾಯಿಯನ್ನೇ ಕಣಕ್ಕಿಳಿಸಲು ಬಯಸಿದ್ದೇನೆ" ಎಂದು ಹೇಳಿದರು.
ಹಣ ಕೊಡಲಿಲ್ಲ, ಟಿಕೆಟ್ ಸಿಗಲಿಲ್ಲ: ನಿಮಗೇಕೆ ಟಿಕೆಟ್ ನೀಡಲಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೆಹಕ್, ''ಅವರು ಕೇಳಿದಷ್ಟು ಹಣ ನೀಡಲಿಲ್ಲ. ಹಾಗಾಗಿ ನನಗೆ ಟಿಕೆಟ್ ನೀಡಿಲ್ಲ. ಹಣ ಕೊಟ್ಟವರಿಗೆ ಇಲ್ಲಿ ಟಿಕೆಟ್ ಸಿಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಸಮಾಜ ಸೇವೆಯಿಂದ ಜನರ ಜೊತೆ ಬೆರೆತಿದ್ದೇನೆ. ಅವರ ಕಷ್ಟ-ನಷ್ಟಗಳನ್ನು ಆಲಿಸಿಕೊಂಡು ಬಂದಿದ್ದೇನೆ. ಯಾವುದೇ ಸಮಸ್ಯೆಯಾಗಲಿ ಜನರಿಗೆ ಸಹಾಯ ಮಾಡಲು ನಾನು ಯಾವಾಗಲೂ ಮುಂದು. ನೆರೆಹೊರೆಯಲ್ಲಿ ಅಥವಾ ಎಲ್ಲೇ ಆಗಲಿ ಜಗಳ ಮತ್ತು ತೊಂದರೆಯಾದಾಗ ನಾನು ಆ ಜಾಗದಲ್ಲಿರುವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ'' ಎಂದಿದ್ದಾರೆ.
ನಾಯಿಗೆ ಅವಕಾಶ ನೀಡದಿದ್ದರೆ..: ''ನನಗೆ ನೀಡಬೇಕಿದ್ದ ಟಿಕೆಟ್ ಅನ್ನು ಬೇರೆ ಅಭ್ಯರ್ಥಿಗೆ ನೀಡಿದ್ದರಿಂದ ಹಲವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಕೋಪವಿದೆ. ಹೀಗಾಗಿ ಅವರೇ ನಾಯಿಯನ್ನು ಚುನಾವಣಾ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ನಿಯಮಾನುಸಾರ ಪ್ರಾಣಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ನಾನೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವೆ'' ಎಂದು ಮೆಹಕ್ ತಿಳಿಸಿದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಮಾಲೀಕ ಅಸುನೀಗಿ 2 ವಾರ ಕಳೆದ್ರೂ ಹುಡುಕಿಕೊಂಡು ಬರುವ ಸಾಕು ನಾಯಿ: ಶ್ವಾನದ ಸ್ವಾಮಿನಿಷ್ಠೆಗೆ ಸರಿಸಾಟಿ ಉಂಟೆ!