ಅದಿಲಾಬಾದ್(ತೆಲಂಗಾಣ): ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ಮಂಡಲದಲ್ಲಿ ಸುಂದರ್ನಗರ ಎಂಬ ಪುಟ್ಟ ಗ್ರಾಮವಿದೆ. 500 ಜನರಿರುವ ಈ ಗ್ರಾಮ ಯಾವುದೇ ಆಡಳಿತಕ್ಕೆ ಒಳಪಟ್ಟಿಲ್ಲ ಎಂಬುದು ಅಚ್ಚರಿ. ಸುತ್ತಮುತ್ತಲು ಹತ್ತಾರು ಗ್ರಾಮ ಪಂಚಾಯಿತಿಗಳಿದ್ದರೂ, ಈ ಊರು ಅನಾಥವಾಗಿದೆ. ಯಾವುದೇ ಪಂಚಾಯಿತಿಯ ಆಡಳಿತಕ್ಕೆ ಸೇರದೆ ಕಳೆದ 18 ವರ್ಷಗಳಿಂದಲೂ ಇಲ್ಲಿನ ಜನರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಗ್ರಾಮ ಪಂಚಾಯಿತಿಯೇ ಇಲ್ಲದ ಗ್ರಾಮ: ಸುಂದರ್‌ನಗರ್ ಗ್ರಾಮ ಯಾವುದೇ ಆಡಳಿತಾತ್ಮಕ ಪರಿಸ್ಥಿತಿಯನ್ನು ಹೊಂದಿಲ್ಲ. ಇದು ಇಂದ್ರವೆಲ್ಲಿ ಮತ್ತು ಯೆಮೈಕುಂಟಾ ಗ್ರಾಮಗಳಿಗೆ ಸಮೀಪವಿದ್ದರೂ ಯಾವುದೇ ಗ್ರಾಮ ಪಂಚಾಯಿತಿಗೆ ಸೇರಿಲ್ಲ. 2006ರಲ್ಲಿ ಇಂದ್ರವೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಮ್ನೆ ನಾಂದೇವ್ ಬಳಿ 90 ವಸತಿರಹಿತ ಕುಟುಂಬಗಳಿಗೆ ಸರಕಾರ 4.20 ಎಕರೆ ಜಾಗ ನೀಡಿತ್ತು. ಇದೇ ಜಾಗ ಕಾಲಾನಂತರದಲ್ಲಿ ಸುಂದರ್‌ನಗರ್ ಅಗಿ ನಿರ್ಮಾಣವಾಗಿದೆ. ಆದರೆ, ಪಂಚಾಯತ್ ಸೌಲಭ್ಯದಿಂದ ವಂಚಿತವಾಗಿದೆ.
ಇಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿವು:
- ಆಡಳಿತದ ಕೊರತೆ, ಅಭಿವೃದ್ಧಿ ಮರೀಚಿಕೆ.
- ಪಿಂಚಣಿ, ರೇಷನ್ ಕಾರ್ಡ್ ಅಥವಾ ಸಬ್ಸಿಡಿ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತ.
- ಗ್ರಾಮದಲ್ಲಿ ರಸ್ತೆ, ಶಾಲೆ, ಕಾಲುವೆ ಅಥವಾ ಇತರೆ ಮೂಲಸೌಕರ್ಯಗಳಿಲ್ಲ.
- ಸಾವು ಅಥವಾ ಜನನ ಕುರಿತು ಯಾವುದೇ ಪ್ರಮಾಣ ಪತ್ರ ಲಭ್ಯವಾಗುತ್ತಿಲ್ಲ. ಈ ಗ್ರಾಮ ಯಾವುದೇ ಪಂಚಾಯತಿ ವ್ಯಾಪ್ತಿಯಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ.
ಉಟ್ನೂರು ಐಟಿಡಿಎ ಅಧಿಕಾರಿಗಳು ಎರಡು ಕೊಳವೆಬಾವಿಗಳನ್ನು ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಒದಗಿಸಿದ್ದು ಬಿಟ್ಟರೆ ಬೇರೇನೂ ಇಲ್ಲಿ ಕಂಡುಬರುವುದಿಲ್ಲ. 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರೂ ಕಂದಾಯ ಪಂಚಾಯತಿ ಇಲ್ಲದಿರುವುದರಿಂದ ಅಭಿವೃದ್ಧಿ ಉಪಕ್ರಮಗಳು ಮುಂದುವರೆದಿಲ್ಲ.
ಇದನ್ನೂ ಓದಿ: ರಾತ್ರೋರಾತ್ರಿ ಭಾರತಕ್ಕೆ ಓಡಿ ಬಂದ ಬಾಂಗ್ಲಾದೇಶದ ಬಾಲಕಿಯ ಬಂಧನ!