ವಿಕಾರಾಬಾದ್ (ತೆಲಂಗಾಣ):ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಹಾವು ಕಚ್ಚಿದ ಬಾಲಕಿಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕರಿಸಿದ ಪರಿಣಾಮ ಬಾಲಕಿ ವಿಷವೇರಿ ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ವರದಿಯಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ದೌಲ್ತಾಬಾದ್ ಮಂಡಲದ ಅಲೆಮಾರಿ ಕುಟುಂಬಕ್ಕೆ ಸೇರಿದ ಬುಡಗ ಜಂಗಮ ಸಮುದಾಯದ ಸಂಗೀತಾ (17) ಮತ್ತು ಆಕೆಯ ವಿಕಲಚೇತನ ತಾಯಿ ರಂಗಮ್ಮ ಅವರು ಗ್ರಾಮದ ಹಳೆ ಕಟ್ಟಡದಲ್ಲಿ ಭಿಕ್ಷಾಟನೆ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಶನಿವಾರ ರಾತ್ರಿ 10 ಗಂಟೆಗೆ ಊಟ ಮುಗಿಸಿ ಪಕ್ಕದ ಗೋಡೆಗೆ ಸಂಗೀತಾ ಕೈ ಹಾಕಿದಾಗ ಹಾವು ಕಚ್ಚಿದೆ.
ಆಕೆ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಬಂದು ತಕ್ಷಣ 108ಕ್ಕೆ ಮಾಹಿತಿ ನೀಡಿದ್ದಾರೆ. 10.30ಕ್ಕೆ ಆಂಬ್ಯುಲೆನ್ಸ್ ಬಂದಿದೆ. ಕೂಡಲೇ ಅವರನ್ನು ಕೊಡಂಗಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರ ಸಲಹೆಯಂತೆ ತಾಂಡೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರಿಂದ ರಂಗಮ್ಮ ಸ್ಥಳೀಯರ ಸಹಾಯದಿಂದ ಮತ್ತೊಂದು 108 ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ.
ಸುಮಾರು ಒಂದು ಗಂಟೆಯ ನಂತರ ಬಂದ ಆಂಬ್ಯುಲೆನ್ಸ್ ಸಿಬ್ಬಂದಿ 'ಹೈದರಾಬಾದ್ ಸರ್ಕಾರಿ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಇಲ್ಲದವರನ್ನು ಸೇರಿಸುವುದಿಲ್ಲ ಎಂದು ಹೇಳಿದ್ದಾರೆ. ಆತಂಕಗೊಂಡು ಕಾರ್ಡ್ ತರಲಿಲ್ಲ ಎಂದು ಹೇಳಿದಾಗ ಸಿಬ್ಬಂದಿ ಆಧಾರ್ ಕಾರ್ಡ್ ತಂದರೆ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಸ್ಥಳೀಯರು ಮನವೊಲಿಸಿದರು ಸಿಬ್ಬಂದಿ ಬಿಡಲಿಲ್ಲ. ಅಷ್ಟರಲ್ಲಿ ಸಂಗೀತಾ ಸ್ಥಿತಿ ಹದಗೆಟ್ಟು ಅಲ್ಲಿಯೇ ಸಾವನ್ನಪ್ಪಿದ್ದಾಳೆ. ತನ್ನ ಮಗಳ ಸಾವಿಗೆ ಅಂಬ್ಯುಲೆನ್ಸ್ ಸಿಬ್ಬಂದಿಯೇ ಕಾರಣ ಎಂದು ರಂಗಮ್ಮ ಆರೋಪಿಸಿದ್ದಾರೆ.
ಇದನ್ನೂ ಓದಿ:ಮಣಿಪುರದಲ್ಲಿ ಬಿಹಾರದ ಬಾಲಕರ ಹತ್ಯೆ: ಒಮ್ಮೆ ನನ್ನ ಮಗನ ಮುಖ ನೋಡಬೇಕೆಂದು ಪೋಷಕರ ಆಕ್ರಂದನ