ಹೈದರಾಬಾದ್:ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇಲ್ಲಿನ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ದೆಹಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದ ಬಿಆರ್ಎಸ್ ಕಾರ್ಯಾಧ್ಯಕ್ಷ, ಮಾಜಿ ಸಚಿವ ಕೆ.ಟಿ.ರಾಮರಾವ್ ವಿರುದ್ಧ ಕಾಂಗ್ರೆಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಸಿಎಂ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ಹಣ ಸಂಗ್ರಹಿಸಿ ದೆಹಲಿ ನಾಯಕರಿಗೆ ಕಳುಹಿಸಿದ ಬಗ್ಗೆ ಸಾಕ್ಷಿ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಬತ್ತಿನ ಶ್ರೀನಿವಾಸ್ರಾವ್ ಅವರು ಹನುಮಕೊಂಡ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ದಾಖಲಿಸಿದ್ದರು. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಬಳಿಕ ಅದನ್ನು ಕೆಟಿಆರ್ ವಾಸವಿರುವ ಬಂಜಾರಹಿಲ್ಸ್ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗ ಮಾಡಿದ್ದಾರೆ.
ಸಿಎಂ ರೇವಂತ್ ರೆಡ್ಡಿ ವಿರುದ್ಧ ಅನುಚಿತ ಹೇಳಿಕೆ ನೀಡಿರುವ ಮಾಜಿ ಸಚಿವ ಕೆಟಿಆರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳು ಹಲವು ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳಿಂದ ಸುಮಾರು 2500 ಕೋಟಿ ರೂಪಾಯಿ ವಸೂಲಿ ಮಾಡಿ ಕಾಂಗ್ರೆಸ್ ನಾಯಕರಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಟಿಆರ್ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಸುಳ್ಳು ಆರೋಪ ಮಾಡಿ, ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬಸ್ಥರ ವಿರುದ್ಧ ಮೂರನೇ ಕೇಸ್:ಬಿಆರ್ಎಸ್ ನಾಯಕರ ಕುಟುಂಬಸ್ಥರ ವಿರುದ್ಧ ದಾಖಲಾದ ಮೂರನೇ ಪ್ರಕರಣ ಇದಾಗಿದೆ. ಇತ್ತೀಚೆಗಷ್ಟೇ ಮಾಜಿ ಸಂಸದ, ಕೆಟಿಆರ್ ಅವರ ಸಹೋದರ ಜೋಗಿನಪಲ್ಲಿ ಸಂತೋಷ್‌ಕುಮಾರ್ ವಿರುದ್ಧ ಬಂಜಾರಹಿಲ್ಸ್ ಪೊಲೀಸ್ ಠಾಣೆಯಲ್ಲಿ ಜಮೀನು ಕಬಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಬಂಜಾರ ಹಿಲ್ಸ್ ರಸ್ತೆ ಸಂಖ್ಯೆ 14ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ನವಯುಗ ಕಂಪನಿಯ ಚಿಂತಾ ಮಾಧವ್ ಎಂಬುವರು ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂತೋಷ್ ಕುಮಾರ್ ಅವರು, ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. 2016ರಲ್ಲಿ ಶ್ಯಾಮಸುಂದರ್ ಫುಲ್ಜಾಲ್ ಎಂಬುವರಿಂದ ಜಮೀನು ಖರೀದಿಸಲಾಗಿದೆ. 8 ವರ್ಷಗಳಿಂದ ಯಾವುದೇ ವ್ಯಾಜ್ಯಗಳು ಉದ್ಭವಿಸಿಲ್ಲ. ಇದೀಗ ದಿಢೀರ್ ಕೇಸ್ ದಾಖಲಿಸಲಾಗಿದೆ. ಜಮೀನು ಖರೀದಿಸಿದ ನಂತರ ಅಲ್ಲಿ ಯಾವುದೇ ನಿರ್ಮಾಣವನ್ನೂ ಕೈಗೆತ್ತಿಕೊಂಡಿಲ್ಲ ಎಂದಿದ್ದಾರೆ.
ಹಾಗೊಂದು ವೇಳೆ ಜಮೀನು ವ್ಯಾಜ್ಯವಿದ್ದರೆ, ಮೊದಲು ಲೀಗಲ್ ನೋಟಿಸ್ ನೀಡಿ ವಿವರಣೆ ಕೇಳಬೇಕು. ಇದ್ಯಾವುದೂ ಮಾಡದೇ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದು ಸಂತೋಷ್ ಕುಮಾರ್ ಸವಾಲು ಹಾಕಿದ್ದಾರೆ. ಚುನಾವಣಾ ಅಫಿಡವಿಟ್ನಲ್ಲೂ ಜಮೀನಿಗೆ ಸಂಬಂಧಿಸಿದ ವಿವರ ನೀಡಲಾಗಿದೆ. ಇದಕ್ಕೂ ಮೊದಲು ದೆಹಲಿ ಮದ್ಯ ಹಗರಣದಲ್ಲಿ ಎಂಎಲ್‌ಸಿ ಆಗಿರುವ ಕೆ. ಕವಿತಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.
ಇದನ್ನೂ ಓದಿ:'ಗ್ಯಾರಂಟಿಗಳ ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ' - ಕೆಟಿಆರ್ ಪೋಸ್ಟ್ಗೆ ಸಿದ್ದರಾಮಯ್ಯ ತಿರುಗೇಟು