ಶ್ರೀನಗರ (ಜಮ್ಮು- ಕಾಶ್ಮೀರ) :ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ ಆರೋಪದಡಿ ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದಲ್ಲಿ ವಿವಿಧ ಇಲಾಖೆಯ 900 ಅಧಿಕಾರಿಗಳು ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಇದರಲ್ಲಿ ಹಲವರು ತಮ್ಮ ಹುದ್ದೆಯನ್ನೂ ಕಳೆದುಕೊಂಡಿದ್ದಾಗಿ ತಿಳಿದುಬಂದಿದೆ.
ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಮತ್ತು ವಂಚನೆಯಲ್ಲಿ ತೊಡಗಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯಾಚರಣೆ ನಡೆಸಿದೆ. ಇದರಲ್ಲಿ ಕಳೆದ 10 ವರ್ಷಗಳಲ್ಲಿ ಅಂದರೆ 2014 ರಿಂದ 36 ಸರ್ಕಾರಿ ಇಲಾಖೆಗಳಿಗೆ ಸೇರಿದ 900ಕ್ಕೂ ಅಧಿಕ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಹಲವರು ಕಾನೂನು ಕ್ರಮಕ್ಕೆ ಗುರಿಯಾಗಿದ್ದರೆ, ಇನ್ನು ಕೆಲವರು ಆರೋಪ ಎದುರಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯ (ಜಿಎಡಿ) ಆಯುಕ್ತ ಕಾರ್ಯದರ್ಶಿ ಎಂ.ರಾಜು ತಿಳಿಸಿದ್ದಾರೆ.
ಎಸಿಬಿ ನಡೆಸಿದ ಕಾರ್ಯಾಚರಣೆಗಳಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗಿದೆ. 900 ಪ್ರಕರಣಗಳ ಪೈಕಿ 351 ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 468 ಕೇಸ್ಗಳು ವಿಚಾರಣೆಯ ಹಂತದಲ್ಲಿವೆ. 81 ಅಧಿಕಾರಿಗಳ ವಿರುದ್ಧದ ಆರೋಪಗಳು ಸಾಮಾನ್ಯ ಆಡಳಿತ ಇಲಾಖೆಯ ಅನುಮತಿಗಾಗಿ (ಇಲಾಖಾ ತನಿಖೆಗಾಗಿ) ಬಾಕಿ ಉಳಿದಿವೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಓದಿ:'ಐಎನ್ಡಿಐಎ' ಮೈತ್ರಿಕೂಟ ಮುಚ್ಚುವುದೊಳಿತು: ಸಿಎಂ ಒಮರ್ ಅಬ್ದುಲ್ಲಾ