ಹಾವೇರಿ: ತನ್ನ ಕಂಠ ಸಿರಿ, ಮುಗ್ಧತೆಯ ಮೂಲಕ ಮನೆ ಮಾತಾದ ಸವಣೂರು ತಾಲೂಕು ಚಿಲ್ಲೂರುಬಡ್ನಿ ಗ್ರಾಮದ ಪ್ರತಿಭೆ ಹನುಮಂತು ಈಗ ಬಿಗ್ ಬಾಸ್ ಫಿನಾಲೆ ತಲುಪಿ ಸುದ್ದಿಯಲ್ಲಿದ್ದಾರೆ.
ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಭಾಷೆಯ ಬಳಕೆ ಹನುಮಂತನನ್ನು ಫಿನಾಲೆವರೆಗೆ ತಂದು ನಿಲ್ಲಿಸಿದೆ. ಫಿನಾಲೆಯಲ್ಲಿರುವ ಹನುಮಂತನ ಜೊತೆ ಐವರು ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 11ರ ಬಿಗ್ ಬಾಸ್ ಪಟ್ಟಕ್ಕಾಗಿ ಪೈಪೋಟಿ ನೀಡುತ್ತಿದ್ದಾರೆ. ಚಿಲ್ಲೂರುಬಡ್ನಿ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಹನುಮಂತ ಈಗ ಕೋಟ್ಯಂತರ ಜನರ ಅಭಿಮಾನ ಗಳಿಸಿದ್ದರ ಹಿಂದೆ ಆತನ ಶ್ರಮ ಮತ್ತು ಪ್ರತಿಭೆ ಇದೆ.
ಈ ಹಿಂದೆ ಕುರಿ ಕಾಯುವ ಹುಡುಗ ತನ್ನ ಕೋಗಿಲೆ ಕಂಠದ ಮೂಲಕ ಖಾಸಗಿ ವಾಹಿನಿಯಲ್ಲಿ ಮನೆ ಮಾತಾದ. ನಿನ್ನೊಳಗ ನೀನು ತಿಳಿದು ನೋಡಣ್ಣ.. ಎಂಬ ಸಂತ ಶಿಶುನಾಳ ಶರೀಫರ ಹಾಡಿನ ಮೂಲಕ ತನ್ನ ಸ್ವರವನ್ನು ನಾಡಿಗೆ ಪರಿಚಯಿಸಿಕೊಂಡ ಹನುಮಂತ ಈಗ ಬಿಗ್ ಬಾಸ್ ಎಂಬ ಅತಿದೊಡ್ಡ ರಿಯಾಲಿಟಿ ಶೋನ ಕೊನೆಯ ಹಂತಕ್ಕೆ ಬಂದು ನಿಂತಿದ್ದಾನೆ.
ಬಡ ಕುಟುಂಬದ ಹನುಮಂತ ತಂದೆ ತಾಯಿಗೆ ಕಿರಿಯ ಮಗನಾಗಿದ್ದು, ಪೋಷಕರು ಅತ್ಯಂತ ಪ್ರೀತಿಯಿಂದಲೇ ಬೆಳೆಸಿದ್ದಾರೆ. ಬಾಲ್ಯದಿಂದಲೂ ತನ್ನದೇ ವಿಶಿಷ್ಟ ಪ್ರತಿಭೆಯ ಮೂಲಕ ಗುರುತಿಸಿಕೊಂಡ ಹನುಮಂತ, ಕುರಿ ಕಾಯುವಾಗ ಶಿಶುನಾಳ ಶರೀಫರ ಗೀತೆಗಳನ್ನು ಹಾಡುತ್ತಿದ್ದ. ಇಂಥಹ ಸಮಯದಲ್ಲಿ ಹನುಮಂತನಿಗೆ ಖಾಸಗಿ ವಾಹಿನಿಯಲ್ಲಿನ ಅವಕಾಶ ಅವನಲ್ಲಿನ ಪ್ರತಿಭೆಯನ್ನು ಹೊರಲೋಕಕ್ಕೆ ಪರಿಚಯಿಸಿತು.
ಖಾಸಗಿ ವಾಹಿನಿಯ ಆ ಕಾರ್ಯಕ್ರಮ ಮುಗಿದ ನಂತರ ಅಲ್ಲಲ್ಲಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಹನುಮಂತ ತಂದೆ- ತಾಯಿ ಜೊತೆ ಹೊಟ್ಟೆಪಾಡಿಗಾಗಿ ಕುರಿ ಕಾಯಲು ಹೊರಟಿದ್ದ. ಆದರೆ ಮತ್ತೆ ತನ್ನ ವಿಶೇಷ ಪ್ರತಿಭೆ ಮತ್ತೆ ಹನುಮಂತನಿಗೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ತಂದುಕೊಟ್ಟಿತು. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಪ್ರವೇಶಿಸಿದ ಹನುಮಂತ ಎಲ್ಲರ ಮನಗೆದ್ದು ಈಗ ಫೈನಲ್ಗೆ ಬಂದು ನಿಂತಿದ್ದಾನೆ.
ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಹನುಮಂತನ ಅಭಿಮಾನಿಗಳು ಗೆದ್ದು ಬಾ ಹನುಮಂತ ಅಂತಾ ಪ್ರಾರ್ಥಿಸುತ್ತಿದ್ದಾರೆ. ಹನುಮಂತನ ತಂದೆ- ತಾಯಿ, ಸಹೋದರ ಸಹ ಹನುಮಂತ ಕರ್ನಾಟಕದ ಜನರ ಆಶೀರ್ವಾದದಿಂದ ಫೈನಲ್ ಗೆದ್ದು ಬರಲಿ ಎನ್ನುತ್ತಿದ್ದಾರೆ. ಎಲ್ಲೆಲ್ಲೂ ಹನುಮಂತ ಗೆದ್ದು ಬಾ ಎಂಬ ಬ್ಯಾನರ್, ಪ್ಲೆಕ್ಸ್ಗಳನ್ನು ಕಟ್ಟಿ ಗೆಲುವಿಗಾಗಿ ಕಾದು ಕುಳಿತಿದ್ದಾರೆ.
ಹನುಮಂತ ಸರಿಗಮಪ ಕಾರ್ಯಕ್ರಮದ ನಂತರ ಸಾಕಷ್ಟು ಸುಖ-ದುಃಖ ಕಂಡಿದ್ದಾನೆ. ಆತನ ತಂದೆ ಮೇಗಪ್ಪ, ತಾಯಿ ಶೀಲವ್ವ ಇಂದಿಗೂ ಜನಸಾಮಾನ್ಯರಂತೆ ಬದುಕುತ್ತಿದ್ದಾರೆ. ಕಾಡಿನಲ್ಲಿ ಕಟ್ಟಿಗೆ ಕಡಿದು ಕುರಿ ಮೇಯಿಸಿಕೊಂಡಿದ್ದ ಈ ಕುಟುಂಬ ಹನುಮಂತನ ಶ್ರಮದಿಂದ ಸ್ವಲ್ಪಮಟ್ಟಿಗೆ ಮೇಲೆ ಬಂದಿದೆ.
ಕೆಲ ಮಾಧ್ಯಮಗಳಲ್ಲಿ ಬಂದಂತೆ ಅಂತೆಕಂತೆಗಳೆಲ್ಲಾ ಸುಳ್ಳು ಎನ್ನುತ್ತಾರೆ ಹನುಮಂತನ ಅಣ್ಣ ಮಾರುತಿ. ಹನುಮಂತ ಬಿಗ್ ಬಾಸ್ನಲ್ಲಿ ಚೆನ್ನಾಗಿ ಆಟವಾಡಿದ್ದಾನೆ. ಅವನು ಗೆದ್ದುಬಂದರೆ ನಮ್ಮ ಕುಟುಂಬ ಒಂದು ಮಟ್ಟಕ್ಕೆ ಬಂದಂತಾಗುತ್ತದೆ. ಎಲ್ಲರೂ ನನ್ನ ತಮ್ಮ ಹನುಮಂತನ ಪರ ಮತ ಚಲಾಯಿಸುವ ಮೂಲಕ ಗೆಲ್ಲಿಸಿ ಎನ್ನುತ್ತಿದ್ದಾರೆ ಹನುಮಂತನ ಸಹೋದರ.
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಉತ್ತರಕರ್ನಾಟಕದ ಏಕೈಕ ಪ್ರತಿನಿಧಿಯಾಗಿರುವ ಹನುಮಂತ ಬಿಗ್ ಬಾಸ್ ಸೀಸನ್ 11ರ ಕಿರೀಟ ಧರಿಸಿ, ಆ ಮೂಲಕ ಹೊಸದೊಂದು ದಾಖಲೆ ಬರೆಯುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಒಳ್ಳೆ ವ್ಯಕ್ತಿತ್ವ ಗೆಲ್ಲಬೇಕು, ಹಾಗಾಗಿ ಹನುಮಂತು ವಿಜೇತರಾಗಬೇಕು': ಮಂಜು ಆಪ್ತ ಸ್ನೇಹಿತೆ ಗೌತಮಿ