ಗೋರಖ್ಪುರ (ಉತ್ತರ ಪ್ರದೇಶ) : ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತ ಇಬ್ಬರು ಮಹಿಳೆಯರು ಮನೆ ತೊರೆದು ಹೋಗಿ ಪರಸ್ಪರ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಕವಿತಾ ಮತ್ತು ಗುಂಜು ಆಲಿಯಾಸ್ ಬಬ್ಲು ಮದುವೆಯಾದ ಜೋಡಿ. ಈ ಇಬ್ಬರು ಸಣ್ಣ ಕಾಶಿ ಎಂದು ಕರೆಯಲಾಗುವ ಡಿಯೋರಿಯಾದಲ್ಲಿನ ಶಿವನ ದೇಗುಲದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಇಬ್ಬರು ಮೊದಲಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಇಬ್ಬರ ಗಂಡಂದಿರು ಕೂಡ ಮದ್ಯದ ಚಟಕ್ಕೆ ದಾಸರಾಗಿದ್ದಲ್ಲದೇ, ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದರು. ಇಬ್ಬರದ್ದು ಬಹುತೇಕ ಒಂದೇ ರೀತಿಯ ಪರಿಸ್ಥಿತಿ ಇದ್ದ ಹಿನ್ನೆಲೆ ಅವರು ಹೆಚ್ಚು ಆಪ್ತರಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇಗುಲದಲ್ಲಿ ಮದುವೆ ಆಗುವಾಗ ಗುಂಜಾ ವರನ ಪಾತ್ರ ನಿರ್ವಹಿಸಿದ್ದು, ಆಕೆಯೇ ಕವಿತಾ ಹಣೆಗೆ ಸಿಂಧೂರ ಹಚ್ಚಿದ್ದಾರೆ. ಬಳಿಕ ಪರಸ್ಪರ ಹಾರ ಬದಲಾಯಿಸಿಕೊಂಡು, ಸಪ್ತಪದಿ ತುಳಿದಿದ್ದಾರೆ.
ಈ ಕುರಿತು ಮಾತನಾಡಿರುವ ಗುಂಜು, ನಾವಿಬ್ಬರು ನಮ್ಮ ಗಂಡಂದಿರ ಕುಡಿತದ ಚಟ ಮತ್ತು ದೌರ್ಜನ್ಯದ ನಡುವಳಿಕೆಯಿಂದ ರೋಸಿ ಹೋಗಿದ್ದೆವು. ಇದು ನಮ್ಮಿಬ್ಬರ ನಡುವೆ ಶಾಂತಿ ಮತ್ತು ಪ್ರೀತಿಯ ಹುಡುಕಾಟಕ್ಕೆ ಕಾರಣವಾಯಿತು. ಗೋರಖ್ಪುರ್ ಅನ್ನು ತೊರೆದು, ನಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದೆವು ಎಂದಿದ್ದಾರೆ.
ಸದ್ಯ ಮದುವೆಯಾಗಿರುವ ಇವರಿಬ್ಬರು, ಮನೆ ಬಾಡಿಗೆ ಪಡೆದು ವಿವಾಹಿತ ಜೋಡಿಯಂತೆ ಒಟ್ಟಿಗೆ ಬಾಳುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಘಟನೆ ಕುರಿತು ಮಾತನಾಡಿರುವ ದೇಗುಲದ ಅರ್ಚಕರಾದ ಉಮಾ ಶಂಕರ್ ಪಾಂಡೆ, ಇಬ್ಬರು ಮಹಿಳೆಯರು ಹೂವಿನ ಹಾರವನ್ನು ಖರೀದಿಸಿ, ಸಿಂಧೂರದ ಸಂಪ್ರದಾಯ ನೆರವೇರಿಸಿ, ದೇಗುಲದಿಂದ ಹೊರಟು ಹೋದರು ಎಂದು ತಿಳಿಸಿದರು.
ಭಾರತದಲ್ಲಿ ಸಲಿಂಗಿಗಳ ಮದುವೆ ಕಾನೂನುಬಾಹಿರವಾಗಿದೆ. 2023ರ ಅಕ್ಟೋಬರ್ 17ರಂದು ಸುಪ್ರೀಂ ಕೋರ್ಟ್ ಸಲಿಂಗಿಗಳ ಮದುವೆ ಕಾನೂನು ಬದ್ಧಗೊಳಿಸುವ ನಿರ್ಧಾರವನ್ನು ತಳ್ಳಿಹಾಕಿತು. ಈ ಕುರಿತು ನಿರ್ಧಾರವು ತನ್ನ ವ್ಯಾಪ್ತಿಯನ್ನು ಮೀರಿದ್ದು, ಅದನ್ನು ಸಂಸತ್ತಿಗೆ ಬಿಡಬೇಕು ಎಂದು ನ್ಯಾಯಾಲಯ ಹೇಳಿತ್ತು.
ಕಾನೂನು ಹೊರತಾಗಿಯೂ, ಸಲಿಂಗ ಜೋಡಿಗಳು ಪರಸ್ಪರ ಮದುವೆಯಾಗುತ್ತಿರುವ ಅಪರೂಪದ ಪ್ರಕರಣಗಳು ವಿವಿಧ ರಾಜ್ಯಗಳಿಂದ ವರದಿಯಾಗುತ್ತಿವೆ. ಇತ್ತೀಚೆಗೆ ಜನವರಿ 10 ರಂದು ಬಿಹಾರದ ಬೇಗುಸರಾಯ್‌ನಲ್ಲಿ ಕೂಡ ಸಲಿಂಗಿ ಜೋಡಿ ದೆಹಲಿಗೆ ಓಡಿಹೋಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. (ವಿವಿಧ ಏಜೆನ್ಸಿಗಳ ಮಾಹಿತಿ)
ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾದ ಸಲಿಂಗ ಜೋಡಿ!
ಇದನ್ನೂ ಓದಿ: ಪತ್ನಿಯ ಹತ್ತಿರ ಸುಳಿಯದ ಗಂಡ; 'ನಾನು ಸಲಿಂಗ ಕಾಮಿ, ನನಗೆ ಹುಡುಗರಂದ್ರೆ' ಇಷ್ಟ ಎಂದ ಪತಿ!