ಅಜಂಗಢ: ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ 57 ವರ್ಷದ ಮಹಿಳೆಯೊಬ್ಬರು 49 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ. ಆಪರೇಷನ್ ಮುಸ್ಕಾನ್ ಅಭಿಯಾನದ ಭಾಗವಾಗಿ ಮಹಿಳೆಯನ್ನು ಕುಟುಂಬದೊಂದಿಗೆ ಮರಳಿ ಸೇರಿಸಲಾಗಿದೆ. ಕಾಣೆಯಾದ ಸಹೋದರಿಯನ್ನು ನೋಡಿ ಸಹೋದರನ ಕಣ್ಣುಗಳು ಸಹ ತೇವಗೊಂಡವು.
ಕಣ್ಮರೆಯಾಗಿದ್ದು 1975ರಲ್ಲಿ ಸಿಕ್ಕಿದ್ದು 2024ರಲ್ಲಿ:1975ರಲ್ಲಿ ಮೊರಾದಾಬಾದ್ನಲ್ಲಿ ನಡೆದ ಜಾತ್ರೆಯಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಬೇರ್ಪಟ್ಟ ಸಹೋದರ ಮತ್ತು ಸಹೋದರಿಯನ್ನು ಮತ್ತೆ ಒಂದುಗೂಡಿಸಿದ ಅಜಂಗಢ ಪೊಲೀಸರ ಕಾರ್ಯವನ್ನು ಕುಟುಂಬ ಸದಸ್ಯರು ಮತ್ತು ಪ್ರದೇಶದ ಜನರು ಶ್ಲಾಘಿಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮರಾಜ್ ಮೀನಾ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಆಪರೇಷನ್ ಮುಸ್ಕಾನ್ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ಅಡಿಯಲ್ಲಿ, ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಜನರನ್ನು ಹುಡುಕಲಾಗುತ್ತಿದೆ.
ಬರೋಬ್ಬರಿ 49 ವರ್ಷದ ಬಳಿಕ ಮಹಿಳೆ ಪತ್ತೆಯಾಗಿದ್ದು ಹೇಗೆ?:ಡಿಸೆಂಬರ್ 19, 2024 ರಂದು ರಾಂಪುರ ಜಿಲ್ಲೆಯ ಪಜಾವಾ ಬಿಲಾಸ್ಪುರದ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಾ.ಪೂಜಾ ರಾಣಿ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಲಾಲ್ ಅವರನ್ನು ಸಂಪರ್ಕಿಸಿದ್ದರು. 49 ವರ್ಷಗಳ ಹಿಂದೆ ಕುಟುಂಬದಿಂದ ಬೇರ್ಪಟ್ಟ ಮಹಿಳೆಯೊಬ್ಬಳಿಗೆ ಆಕೆಯ ಸೋದರಮಾವ ಮತ್ತು ತನ್ನ ಗ್ರಾಮದ ಹೆಸರು ಮಾತ್ರ ತಿಳಿದಿದ್ದು, ಆಕೆಯ ಸಂಬಂಧಿಕರನ್ನು ಹುಡುಕಿ ಕೊಡುವಂತೆ ಶಿಕ್ಷಕಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದರು.
ಫೂಲ್ಮತಿಯನ್ನ ಮಾರಾಟ ಮಾಡಿದ್ದ ಮುದುಕ:ಶಿಕ್ಷಕಿಯ ಪ್ರಕಾರ, 57 ವರ್ಷದ ಫೂಲ್ಮತಿ ಎಂಬ ಮಹಿಳೆ 1975 ರಲ್ಲಿ ಎಂಟು ವರ್ಷದವಳಿದ್ದಾಗ ತನ್ನ ತಾಯಿ ಶ್ಯಾಮದೇಯಿ ಅವರೊಂದಿಗೆ ಮೊರಾದಾಬಾದ್ ಜಾತ್ರೆಗೆ ಹೋಗಿದ್ದಳು. ಜಾತ್ರೆಯಲ್ಲಿ ಮುದುಕನೊಬ್ಬ ಬಾಲಕಿಗೆ ಯಾವುದೋ ಆಸೆ ತೋರಿಸಿ ತನ್ನೊಂದಿಗೆ ಕರೆದೊಯ್ದಿದ್ದ. ಕೆಲ ದಿನ ತನ್ನ ಬಳಿ ಬಾಲಕಿಯನ್ನು ಇಟ್ಟುಕೊಂಡ ಮುದುಕ ಆಕೆಯನ್ನು ರಾಂಪುರ ಜಿಲ್ಲೆಯ ಭೋಂಟ್ ಪೊಲೀಸ್ ಠಾಣೆ ಪ್ರದೇಶದ ರಾಯ್ಪುರ ಗ್ರಾಮದ ನಿವಾಸಿ ಲಲ್ತಾ ಪ್ರಸಾದ್ ಗಂಗ್ವಾರ್ ಎಂಬುವರಿಗೆ ಮಾರಾಟ ಮಾಡಿದ್ದ. ಲಲ್ತಾ ಪ್ರಸಾದ್ ನಂತರ ಫೂಲ್ಮತಿಯನ್ನು ವಿವಾಹವಾಗಿದ್ದು, ದಂಪತಿಗೆ ಸೋಮಪಾಲ್ (34) ಹೆಸರಿನ ಮಗನಿದ್ದಾನೆ. ಈ ಸಮಯದಲ್ಲಿ ಫೂಲ್ಮತಿ ತನ್ನ ಕುಟುಂಬವನ್ನು ಹುಡುಕಲು ಯತ್ನಿಸುತ್ತಿದ್ದಾಳೆ ಎಂದು ಶಿಕ್ಷಕಿ ಮಾಹಿತಿ ನೀಡಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನಗರ ಎಸ್ಪಿ ಈ ಬಗ್ಗೆ ತನಿಖೆಗಾಗಿ ತಂಡವೊಂದನ್ನು ರಚಿಸಿದರು. ನಂತರ ಕಾರ್ಯಪ್ರವೃತ್ತವಾದ ತಂಡವು ಫೂಲ್ಮತಿ ಅವರನ್ನು ಅಜಂಗಢಕ್ಕೆ ಕರೆದುಕೊಂಡು ಬಂದರು. ಚೂಂಟಿದಾರ್ ಹೆಸರಿನ ಗ್ರಾಮದಲ್ಲಿ ರಾಮಚಂದರ್ ಹೆಸರಿನ ಸೋದರಮಾವ ಒಬ್ಬನಿದ್ದ ಮತ್ತು ಅವರ ಮನೆಯ ಅಂಗಳದಲ್ಲಿ ಒಂದು ಬಾವಿ ಇತ್ತು ಎಂಬ ಫೂಲ್ಮತಿ ಅವರ ನೆನಪು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ಸುದೀರ್ಘ ಅಭಿಯಾನದ ಬಳಿಕ ತನ್ನ ಕುಟುಂಬ ಸೇರಿದ ಪೂಲ್ಮತಿ:ತನಿಖೆಯ ಸಮಯದಲ್ಲಿ, ಚೂಂಟಿದಾರ್ ಹೆಸರಿನ ಗ್ರಾಮವು ಮೌ ಜಿಲ್ಲೆಯ ದೋಹ್ರಿಘಾಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವುದನ್ನು ಪೊಲೀಸರು ಪತ್ತೆ ಮಾಡಿದರು. ಫೂಲ್ಮತಿ ನೀಡಿದ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ ನಂತರ ಪೊಲೀಸ್ ತಂಡವು ಫೂಲ್ಮತಿಯ ತಾಯಿಯ ಚಿಕ್ಕಪ್ಪನ ಮನೆಗೆ ತಲುಪಿತು. ಅಲ್ಲಿ ಮಹಿಳೆಯ ಮೂವರು ಸೋದರಮಾವರಲ್ಲಿ ಒಬ್ಬರಾದ ರಾಮಹಿತ್ ಭೇಟಿಯಾದರು. ಫೂಲ್ಮತಿ ಕಾಣೆಯಾಗಿರುವುದನ್ನು ದೃಢಪಡಿಸಿದ ಅವರು, ಆಕೆಯ ಸಹೋದರ ಲಾಲಧರ್ ಅಜಂಗಢದ ರೌನಪರ್ ಪೊಲೀಸ್ ಠಾಣೆ ಪ್ರದೇಶದ ವೇದಪುರದಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಮಹಿಳೆಯ ಸಹೋದರ ಕೂಡ ಆಕೆ ಕಾಣೆಯಾಗಿರುವುದನ್ನು ದೃಢಪಡಿಸಿದ್ದಾನೆ. ಈ ರೀತಿಯಾಗಿ, ಸುದೀರ್ಘ ಅಭಿಯಾನದ ನಂತರ ಫೂಲ್ಮತಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾರೆ.