ಬಸ್ತಾರ್ (ಛತ್ತೀಸ್‌ಗಢ): ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಹಲವು ನಕ್ಸಲರು ಹತ್ಯೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರದೇಶದಲ್ಲಿ ಈಗಲೂ ಭದ್ರತಾ ಪಡೆಗಳು ತಮ್ಮ ಶೋಧ ಕಾರ್ಯಾಚರಣೆ ಮುಂದುವರೆಸಿವೆ.
ಶನಿವಾರ ಬೆಳಗ್ಗೆ ಅಬುಜ್ಮದ್ ಅರಣ್ಯದಲ್ಲಿ ನಾಲ್ಕು ಜಿಲ್ಲೆಗಳ ಭದ್ರತಾ ಸಿಬ್ಬಂದಿ ನಡೆಸಿದ ಜಂಟಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಎಂಟು ನಕ್ಸಲರ ಹತ್ಯೆ ಮಾಡಲಾಗಿದೆ. ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ. ಗುಂಡಿನ ಚಕಮಕಿಯಲ್ಲಿ ಈವರೆಗೆ ಎಂಟು ನಕ್ಸಲರು ಹತ್ಯೆಯಾಗಿದ್ದಾರೆ. ಇದೇ ವೇಳೆ, ಒರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ನಾರಾಯಣಪುರದ ಅಬುಜ್ಮದ್ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಇದೇ ರೀತಿಯ ಗುಂಡಿನ ಚಕಮಕಿ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಆರಂಭವಾಗಿರುವ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿ ಶನಿವಾರವೂ ಮುಂದುವರೆದಿದೆ. ಬಸ್ತಾರ್, ನಾರಾಯಣಪುರ, ಕೊಂಡಗಾಂವ್, ದಂತೇವಾಡ ಪ್ರದೇಶದಲ್ಲಿ ಬೀಡುಬಿಟ್ಟಿರುವ ನಕ್ಸಲರು ಮಧ್ಯೆ ಮಧ್ಯೆ ಗುಂಡಿನ ದಾಳಿ ನಡೆಸುತ್ತಿದ್ದು, ಭದ್ರತಾ ಪಡೆ ಪ್ರತಿದಾಳಿ ನಡೆಸಿದೆ.