ನವದೆಹಲಿ: ಹಿಮಚಿರತೆಗಳ ಸಂಖ್ಯೆ, ಜೀವನ ಕ್ರಮ, ಆಹಾರ ವಿಧಾನ ಹಾಗೂ ಆವಾಸ ಸ್ಥಾನಗಳ ಬಗ್ಗೆ 2023ರಲ್ಲಿ ನಡೆಸಿದ ಅಧ್ಯಯನ ಹಾಗೂ ಗಣತಿಯ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿಗದೆ. ಈ ವರದಿಯ ಪ್ರಕಾರ ಸದ್ಯ ದೇಶದಲ್ಲಿ ಒಟ್ಟು 718 ಹಿಮಚಿರತೆಗಳಿವೆ. ಅವುಗಳಲ್ಲಿ ಗರಿಷ್ಠ ಸಂಖ್ಯೆಯ ಹಿಮಚಿರತೆಗಳು ಲಡಾಖ್ನಲ್ಲಿವೆ ಎಂದು ಕೇಂದ್ರ ಪರಿಸರ ಸಚಿವಾಲಯ ಮಂಗಳವಾರ ಅಂಕಿಅಂಶ ನೀಡಿದೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಸಚಿವ ಭೂಪೇಂದರ್ ಯಾದವ್, ದೇಶದಲ್ಲಿ ಹಿಮಚಿರತೆಗಳ ಸ್ಥಿತಿಗತಿ ವರದಿಯನ್ನು ಬಿಡುಗಡೆ ಮಾಡಿದರು. ವೈಜ್ಞಾನಿಕ ವಿಧಾನಗಳ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ನಡೆದ ಹಿಮ ಚಿರತೆಗಳ ಜನಸಂಖ್ಯೆಯ ವರದಿ ಇದಾಗಿದೆ ಎಂದು ಸಚಿವಾಲಯ ಹೇಳಿದೆ.
ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII), ಹಿಮ ಚಿರತೆಗಳಿರುವ ಭಾರತದ ಶ್ರೇಣಿಯ ರಾಜ್ಯಗಳು, ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್ ಹಾಗೂ WWFಗಳ ಸಹಕಾರದೊಂದಿಗೆ 2019ರಿಂದ 2023ರ ನಡುವೆ ಭಾರತದಲ್ಲಿ ಮೊದಲ ಬಾರಿಗೆ 'ಹಿಮ ಚಿರತೆಗಳ ಜನಸಂಖ್ಯೆಯ ಮೌಲ್ಯಮಾಪನ' (SPAI- Snow Leopard Population Assessment in India) ನಡೆಸಿದೆ.
ಈ ವರದಿಯು ಭಾರತದಲ್ಲಿ ಸಂಭಾವ್ಯ ಹಿಮಚಿರತೆಗಳಿರುವ ಶ್ರೇಣಿಯ ಶೇಕಡಾ 70ರಷ್ಟು ಭಾಗಗಳಲ್ಲಿ ಅಧ್ಯಯನ ನಡೆಸಿದೆ. ಅರಣ್ಯ ಮತ್ತು ವನ್ಯಜೀವಿ ಸಿಬ್ಬಂದಿ, ಸಂಶೋಧಕರು, ಸ್ವಯಂಸೇವಕರು ಮತ್ತು ಜ್ಞಾನ ಪಾಲುದಾರರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಎರಡು ಹಂತಗಳಲ್ಲಿ ಹಿಮ ಚಿರತೆಗಳ ಸಂಖ್ಯೆಯ ಮೌಲ್ಯಮಾಪನ ನಡೆದಿದೆ.
ಭಾರತ ಶ್ರೇಣಿ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಹಿಮಾಲಯ ಪ್ರದೇಶದಾದ್ಯಂತ ಸುಮಾರು 1,20,000 ಕಿ.ಮೀ. ಪ್ರದೇಶಗಳ ಸಂಭಾವ್ಯ ಹಿಮಚಿರತೆಗಳ ಆವಾಸಸ್ಥಾನಗಳಲ್ಲಿ ಈ ಅಧ್ಯಯನ, ಗಣತಿ ನಡೆಸಲಾಗಿದೆ.