ಮುಂಬೈ/ ರಾಂಚಿ: ಬುಧವಾರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಂದಾಜು ಶೇಕಡಾ 60 ರಷ್ಟು ಮತದಾನ ದಾಖಲಾಗಿದೆ. ಅಂತಿಮವಾಗಿ ಇದು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ನಾಳೆ ಅಂತಿಮ ಮತದಾನ ಪ್ರಮಾಣ ಗೊತ್ತಾಗಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟವು ಅಧಿಕಾರಕ್ಕೆ ಏರುವ ದೃಢ ಪ್ರಯತ್ನ ನಡೆಸುತ್ತಿವೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟಾರೆ 61.74 ರಷ್ಟು ಮತದಾನ ದಾಖಲಾಗಿತ್ತು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮಹಾನಗರಿಯಲ್ಲಿ ಶೇ 51.41ರಷ್ಟು ಮತದಾನ:ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯಲ್ಲಿ ಬುಧವಾರ ಶೇ.69.63ರಷ್ಟು ಮತದಾನವಾಗಿದ್ದು, ಆರ್ಥಿಕ ರಾಜಧಾನಿ ಮುಂಬೈನಲ್ಲಿ ಶೇ.51.41ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಮುಂಬೈನ ಮತದಾನದ ಅಂಕಿ ಅಂಶವು 50.67 ಪ್ರತಿಶತದಷ್ಟಿತ್ತು.
ಮತಗಟ್ಟೆಗೆ ಬಂದು ವೋಟ್ ಹಾಕಿದ ಸೆಲೆಬ್ರಿಟಿಗಳು:ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಗ್ಲಾಮರ್ ಸ್ಪರ್ಶ ನೀಡಿದರು. 288 ವಿಧಾನಸಭಾ ಸ್ಥಾನಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. 1,00,186 ಬೂತ್‌ಗಳಲ್ಲಿ 4,100 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಬರೆಯಲು ಜನರು ಮುದ್ರೆಯೊತ್ತಿದರು.
ಎರಡೂ ಮೈತ್ರಿಕೂಟಗಳ ನಡುವೆ ಜಂಗಿ ಕುಸ್ತಿ:ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿರೋಧ ಪಕ್ಷದ ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಅಭ್ಯರ್ಥಿಗಳನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ.
ಬಹುಜನ ಸಮಾಜ ಪಕ್ಷ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ನಂತಹ ಪಕ್ಷಗಳು ಸಹ ಅಖಾಡದಲ್ಲಿವೆ. ಬಿಎಸ್‌ಪಿ 237 ಅಭ್ಯರ್ಥಿಗಳನ್ನು ಮತ್ತು ಎಐಎಂಐಎಂ 17 ಅಭ್ಯರ್ಥಿಗಳನ್ನು ಚುನಾವಣಾ ಅಖಾಡದಲ್ಲಿ ಸ್ಪರ್ಧೆಗೆ ಬಿಟ್ಟಿದೆ
ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ರಲ್ಲಿ 30 ಸ್ಥಾನಗಳನ್ನು ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿತ್ತು. 2019ರ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ.28ರಷ್ಟು ಹೆಚ್ಚಾಗಿದೆ. ಈ ವರ್ಷ 4,136 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2019ರ ಚುನಾವಣೆಯಲ್ಲಿ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.