ಅಯೋಧ್ಯೆ: ಇಂದು ಮಧ್ಯಾಹ್ನ ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಎರಡು ಗಂಟೆಗಳ ಕಾಲ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50 ಸಂಗೀತ ವಾದ್ಯಗಳಿಂದ 'ಮಂಗಳ ವಾದ್ಯ' ಮೊಳಗಲಿದೆ. ಬೆಳಿಗ್ಗೆ 10 ಗಂಟೆಗೆ 'ಮಂಗಳ ಧ್ವನಿ' ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯವರೆಗೂ ವಿವಿಧ ವಾದ್ಯಗಳ ಸಂಗೀತ ಮಾರ್ಧನಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರತಿನಿಧಿಯಾಗಿ ವೀಣೆ, ಉತ್ತರ ಪ್ರದೇಶದ ಪಖ್ವಾಜ್, ಕೊಳಲು, ಧೋಲಕ್, ಆಂಧ್ರ ಪ್ರದೇಶದ ಘಟಂ, ಮಹಾರಾಷ್ಟ್ರದ ಸುಂದರಿ, ಪಂಜಾಬ್ನ ಅಲ್ಗೋಜಾ, ಒಡಿಶಾದ ಮರ್ದಲ್, ಮಧ್ಯಪ್ರದೇಶದ ಸಂತೂರ್, ಗುಜರಾತ್ ಸಂತರ್, ಬಿಹಾರದ ಪಖವಾಜ್, ಮಣಿಪುರದ ಪುಂಗ್, ಅಸ್ಸಾಂನ ನಾಗಡಾ ಮತ್ತು ಕಾಳಿ, ಛತ್ತೀಸ್ಗಢದ ತುಂಬೂರಾ, ದೆಹಲಿಯ ಶೆಹನಾಯಿ, ರಾಜಸ್ಥಾನದ ರಾವಣಹತ, ಪಶ್ಚಿಮ ಬಂಗಾಳದ ಶ್ರೀಖೋಲ್ ಮತ್ತು ಸರೋದ್, ಜಾರ್ಖಂಡ್ನ ಸಿತಾರ್, ಉತ್ತರಾಖಂಡದ ಹುಡ್ಕಾ, ತಮಿಳುನಾಡಿನ ನಾಗಸ್ವರಂ, ತವಿಲ್, ಮೃದಂಗ ಸೇರಿ ಭಾರತೀಯ ಸಂಗೀತ ಸಂಪ್ರದಾಯದಲ್ಲಿ ಬಳಸುವ ಎಲ್ಲಾ ವಾದ್ಯಗಳನ್ನು ಶ್ರೀ ರಾಮ ಮಂದಿರದ ಪ್ರಾಂಗಣದಲ್ಲಿ ನುಡಿಸಲಾಗುತ್ತದೆ. ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ಈ ಭವ್ಯ ಸಂಗೀತ ಮೇಳವನ್ನು ಆಯೋಜಿಸಿದ್ದಾರೆ.