ಸೇಲಂ, ತಮಿಳುನಾಡು:ಇಲ್ಲಿನಯೆರ್ಕಾಡ್ ಹಿಲ್ ರೋಡ್ ನಲ್ಲಿ ಸೇಲಂಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿ ಬಿದ್ದಿತ್ತು. ಈ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಆ ಸಾವಿನ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.
20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಸೇಲಂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಇಂದು ಬೆಳಗ್ಗೆ 5ಕ್ಕೆ ಏರಿಕೆಯಾಗಿದೆ. ಮೃತರೆಲ್ಲರೂ ಸೇಲಂ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಏತನ್ಮಧ್ಯೆ, ಸೇಲಂ ಜಿಲ್ಲಾಧಿಕಾರಿ ಬೃಂದಾ ದೇವಿ ಅವರು 30 ಕಿಲೋಮೀಟರ್ ವೇಗದ ಮಿತಿಯನ್ನು ಮೀರಿದ ವಾಹನಗಳು ಮತ್ತು ನಿಯಮಗಳನ್ನು ಉಲ್ಲಂಘಿಸುವ ಚಾಲಕರ ವಿರುದ್ಧ ಕಟ್ಟುನಿಟ್ಟಾಗಿ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಸರ್ಕಾರದ ಸೂಚನೆಯನ್ನು ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಇನ್ನು ಅನುಭವಿ ಚಾಲಕರು ಮಾತ್ರ ವಾಹನ ಚಲಾಯಿಸಬೇಕು, ಯೇರ್ಕಾಡು ತಪ್ಪಲಿನ ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಮತ್ತು ಸ್ಥಳೀಯ ಸಾರಿಗೆ ಇಲಾಖೆಯಿಂದ ತಪಾಸಣೆ ನಡೆಸಿದ ನಂತರವೇ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ತಿಳಿಸಿದ್ದಾರೆ.