ಪ್ರಯಾಗ್ರಾಜ್:ಸನಾತನಿಗಳ ಮಹಾ ಕುಂಭಮೇಳದಲ್ಲಿ ಅಚಾತುರ್ಯವೊಂದು ಘಟಿಸಿದೆ. ಇಂದು ಮಧ್ಯರಾತ್ರಿ 1.30 ರ ಸುಮಾರಿನಲ್ಲಿ ತ್ರಿವೇಣಿ ಸಂಗಮದ ಸಮೀಪ ಕಾಲ್ತುಳಿತ ಉಂಟಾಗಿದೆ. ಇದಕ್ಕೆ ಹಲವು ಕಾರಣಗಳಿದ್ದರೂ, ಇಲ್ಲಿರುವ 41 ಘಾಟ್ಗಳ ಪೈಕಿ ಸಂಗಮ್ ಘಾಟ್ಗೇ ಹೆಚ್ಚಿನ ಭಕ್ತರು ಹರಿದು ಬಂದಿದ್ದು ದುರ್ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇಂದು ಮೌನಿ ಅಮಾವಾಸ್ಯೆ ಕಾರಣ ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರು ಮಹಾಕುಂಭ ನಗರಕ್ಕೆ ಹರಿದು ಬರುತ್ತಿದ್ದಾರೆ. ಕಾಲ್ತುಳಿತದಲ್ಲಿ ಈವರೆಗೂ 17 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಐಜಿ ವೈಷ್ಣವ್ ಕೃಷ್ಣ ಅವರು ಮಾಹಿತಿ ನೀಡಿದಂತೆ, "ಕಾಲ್ತುಳಿತದ ನಂತರ ಅಖಾಡಗಳು ಅಮೃತಸ್ನಾನವನ್ನು ರದ್ದುಗೊಳಿಸಿದವು. ನಂತರ ಸರಳ ಸ್ನಾನಕ್ಕೆ ಒಪ್ಪಿವೆ. ಪೊಲೀಸರು ಜನಸಂದಣಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಎಲ್ಲವೂ ತಹಬದಿಗೆ ಬಂದಿದೆ" ಎಂದು ಹೇಳಿದ್ದಾರೆ.
ಬಟ್ಟೆ ಬದಲಿಸುವ ಕೋಣೆ ಕುಸಿತ:"ಭಕ್ತರ ಮೇಲೆ ಬಟ್ಟೆ ಬದಲಾಯಿಸುವ ಕೋಣೆ ಬಿದ್ದದ್ದೇ ಕಾಲ್ತುಳಿತಕ್ಕೆ ಮೊದಲ ಕಾರಣ ಎಂದು ಹೇಳಲಾಗುತ್ತಿದೆ. ಇಂದು ಮೌನಿ ಅಮಾವಾಸ್ಯೆಯಾದ ಕಾರಣ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಇಡೀ ಪ್ರಯಾಗ್ರಾಜ್ ನಗರವು ಜನರಿಂದ ತುಂಬಿ ತುಳುಕುತ್ತಿದೆ. ತ್ರಿವೇಣಿ ಸಂಗಮದ ಕಡೆಗೆ ಬರುವ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಶಾಸ್ತ್ರಿ ಸೇತುವೆ, ನೈನಿ ಸೇತುವೆಯ ಮೇಲೆ ಅಸಂಖ್ಯಾತ ಜನರು ಚಲಿಸುತ್ತಿದ್ದಾರೆ" ಎಂದರು.
ಸಂಗಮ್ ಘಾಟ್ನಲ್ಲಿ ಜನವೋ ಜನ:"ಮಹಾಕುಂಭ ನಗರದಲ್ಲಿ ಜನರ ಪುಣ್ಯ ಸ್ನಾನಕ್ಕೆ 41 ಘಾಟ್ಗಳನ್ನು ನಿರ್ಮಿಸಲಾಗಿದೆ. ಆದರೆ, ಸಂಗಮ್ ಘಾಟ್ ಕಡೆಗೆ ಹೆಚ್ಚಿನ ಭಕ್ತರು ಬರುತ್ತಿದ್ದಾರೆ. ಇದು ನಿಯಂತ್ರಣ ತಪ್ಪಲು ಕಾರಣವಾಗಿದೆ. ಈ ಪ್ರದೇಶವು ಮೂರು ನದಿಗಳ ಸಂಗಮವಾಗುವ ಸ್ಥಳವಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಈ ಘಾಟ್ನಲ್ಲಿ ದುರಂತ ಸಂಭವಿಸಿದೆ" ಎಂದು ಅಧಿಕಾರಿ ತಿಳಿಸಿದರು.