ಕಛ್ (ಗುಜರಾತ್):ಇಲ್ಲಿನ ನರ್ಮದಾ ಕಾಲುವೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ನೀರಿನಲ್ಲಿ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಎಲ್ಲರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.
ವಾಗಡ್ ಪ್ರದೇಶದ ಶಕ್ತಿನಗರ ಗೇಡಿಯಲ್ಲಿ ಮಂಗಳವಾರ ಈ ಅನಾಹುತ ಸಂಭವಿಸಿದೆ. ರಭಸವಾಗಿ ಹರಿಯುತ್ತಿದ್ದ ನರ್ಮದಾ ಕಾಲುವೆ ನೀರಿನಲ್ಲಿ ಮಗುವೊಂದು ಕೊಚ್ಚಿ ಹೋಗುತ್ತಿತ್ತು. ಇದನ್ನು ಕಂಡ ಕೂಲಿ ಕಾರ್ಮಿಕರು ತಕ್ಷಣವೇ ಕಾಲುವೆಗೆ ಜಿಗಿದಿದ್ದಾರೆ. ಹೇಗೋ ಮಗುವನ್ನು ರಕ್ಷಿಸಲಾಗಿದೆ. ದುರಾದೃಷ್ಟವಶಾತ್ ನಾಲ್ವರು ಕಾರ್ಮಿಕರು ಕಾಲುವೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಚಪ್ಪಲಿಗಾಗಿ ಕಾಲುವೆಗೆ ಬಿದ್ದ ಮಗು:ಕಾಲುವೆ ಪಾತ್ರದ ಜಮೀನುಗಳಲ್ಲಿ ವಿವಿಧ ಬೆಳೆಗಳ ಕಟಾವು ಕಾರ್ಯ ನಡೆಯುತ್ತಿದ್ದು, ಇತರ ರಾಜ್ಯಗಳಿಂದ ಕಾರ್ಮಿಕರು ವಲಸೆ ಬಂದಿದ್ದಾರೆ. ಇದೇ ವೇಳೆ ಕೂಲಿ ಕಾರ್ಮಿಕರ ಮಗು ಕಾಲುವೆಯ ಪಕ್ಕದಲ್ಲಿ ಆಡುತ್ತಿದ್ದಾಗ ಅದರ ಚಪ್ಪಲಿ ನೀರಿಗೆ ಬಿದ್ದಿದೆ. ಇದನ್ನು ಎತ್ತಿಕೊಳ್ಳಲು ಮಗು ನೀರಿಗೆ ಇಳಿದಾಗ, ಕೊಚ್ಚಿಕೊಂಡು ಹೋಗಿದೆ.
ಅಲ್ಲಿಯೇ ಇದ್ದ ನಾಲ್ವರು ಕಾರ್ಮಿಕರು ಇದನ್ನು ಕಂಡು, ನೀರಿಗೆ ಹಾರಿದ್ದಾರೆ. ಮಗುವನ್ನು ರಕ್ಷಿಸುವ ಭರದಲ್ಲಿ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಸುದೈವವಶಾತ್ ಮಗು ಬದುಕುಳಿದಿದೆ. ದುರಂತದ ಬಗ್ಗೆ ತಿಳಿದ ಜನರು ಕಾಲುವೆಗೆ ಬಂದು ಶೋಧ ನಡೆಸಿದ್ದಾರೆ. ಈ ವೇಳೆ ಮೊದಲು ಮೂವರ ಶವ ಸಿಕ್ಕಿದೆ. ಗಂಟೆಗಳ ಹುಡುಕಾಟದ ನಂತರ ಇನ್ನೊಬ್ಬ ಕಾರ್ಮಿಕನ ಶವವನ್ನೂ ಪತ್ತೆ ಮಾಡಲಾಗಿದೆ.
ನಾಲ್ವರು ಕಾರ್ಮಿಕರು ಸ್ಥಳೀಯರಲ್ಲ ಎಂಬುದು ತಿಳಿದುಬಂದಿದೆ. ಮೃತರೆಲ್ಲರೂ ತಮ್ಮ ಕುಟುಂಬದೊಂದಿಗೆ ಹತ್ತಿ ಹೊಲಗಳಲ್ಲಿ ಕೆಲಸ ಮಾಡಲು ಬಂದಿದ್ದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಧಿಕಾರಿಗಳು ಶವಗಳನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಅಪ್ಪ-ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಮುಳುಗು ತಜ್ಞರ ನೆರವಿನಿಂದ ಅವರ ಶವಗಳನ್ನು ಹೊರತೆಗೆಯಲಾಗಿತ್ತು. ಇದೀಗ ಇದೇ ಕಾಲುವೆಯಲ್ಲಿ ನಾಲ್ವರು ಕಾರ್ಮಿಕರು ಬಲಿಯಾಗಿದ್ದಾರೆ. ಹಬ್ಬದ ಸಂಭ್ರಮದ ನಡುವೆ ದುರಂತಗಳು ಸಂಭವಿಸುತ್ತಿರುವುದು ಮೃತರ ಕುಟುಂಬಗಳಿಗೆ ನೋವುಂಟು ಮಾಡಿದೆ.
ಇದನ್ನೂ ಓದಿ:ಕೇರಳದಲ್ಲಿ ಭೀಕರ ರೈಲು ಅಪಘಾತ: ನಾಲ್ವರು ಪೌರ ಕಾರ್ಮಿಕರು ಸಾವು