ಭೋಪಾಲ್ (ಮಧ್ಯಪ್ರದೇಶ):ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳನ್ನು ನೇಮಕ ಮಾಡುವಲ್ಲಿ ಭಾರೀ ಲೋಪ ಕಂಡುಬಂದಿದೆ. ಸಾಕಷ್ಟು ಬೋಧನಾ ಅನುಭವದ ಕೊರತೆ ಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡುವ ಮೂಲಕ 32 ವಿವಿಗಳು ನಿಯಮ ಮೀರಿವೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಅರ್ಹತಾ ಮಾನದಂಡಗಳನ್ನು ಪೂರೈಸದ ರಾಜ್ಯದ 32 ಖಾಸಗಿ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ತಕ್ಷಣವೇ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಕ್ರಮ ಜರುಗಿಸಲಾಗುತ್ತಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘರ್ ಅವರು ಕೇಳಿದ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರ ನೀಡಿದ್ದು, ರಾಜ್ಯದ 54 ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ 21 ಉಪಕುಲಪತಿಗಳು ಮಾತ್ರ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಖಾಸಗಿ ವಿಶ್ವವಿದ್ಯಾಲಯಗಳ ವ್ಯವಸ್ಥಾಪಕರಿಂದ ನೇಮಕಗೊಂಡ ಈ ಉಪಕುಲಪತಿಗಳು, ಪ್ರಾಧ್ಯಾಪಕರಾಗಿ 10 ವರ್ಷಗಳ ಕಡ್ಡಾಯ ಬೋಧನಾ ಅನುಭವದ ಅರ್ಹತೆಯನ್ನು ಪೂರೈಸಿಲ್ಲ. ಜೊತೆಗೆ ಇನ್ನಿತರ ಮಾನದಂಡಗಳೂ ಉಲ್ಲಂಘನೆಯಾಗಿವೆ. ಹೀಗಾಗಿ, ಅವರನ್ನು ಹುದ್ದೆಯಿಂದ ಬರ್ಖಾಸ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ಮಾನದಂಡಗಳನ್ನು ಉಲ್ಲಂಘಿಸಿ ವಿಸಿಗಳನ್ನು ನೇಮಕ ಮಾಡಿದ 32 ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಾನದಂಡಗಳನ್ನು ಅನುಸರಿಸಿ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ. ಮಾನದಂಡಗಳಿಗೆ ಅನುಗುಣವಾಗಿ ನೇಮಕ ಮಾಡಿದ ಮತ್ತು ಅನರ್ಹರನ್ನು ತೆಗೆದುಹಾಕಿದ ಬಗ್ಗೆ ಮಾಹಿತಿ ನೀಡಲು ವಿವಿಗಳಿಗೆ ಸೂಚಿಸಲಾಗಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.
ಕೂಡಲೇ ಅನರ್ಹ ಉಪಕುಲಪತಿಗಳನ್ನು ತೆಗೆದುಹಾಕಿ ಅಗತ್ಯ ಅರ್ಹತೆ ಇರುವ ಹಂಗಾಮಿ ಉಪಕುಲಪತಿಗಳನ್ನು ನೇಮಕ ಮಾಡುವಂತೆ ಖಾಸಗಿ ವಿವಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ:ಲೋಕಸಭೆಯಲ್ಲಿ ಮಂಡನೆಯಾದ ಒಂದು ದೇಶ, ಒಂದು ಚುನಾವಣೆ ವಿಧೇಯಕ: ವಿಸ್ತೃತ ಚರ್ಚೆಗಾಗಿ ಜೆಪಿಸಿಗೆ ರವಾನೆ