ರಾಮ್ಗಢ (ಜಾರ್ಖಂಡ್) :ಮೂವರು ಶಾಲಾ ಮಕ್ಕಳು ಸೇರಿದಂತೆ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿರುವ ಭೀಕರ ಘಟನೆ ಜಾರ್ಖಂಡ್ನ ರಾಮ್ಗಢ ಜಿಲ್ಲೆಯ ಗೋಲಾ ಪೊಲೀಸ್ ರಾಣಾ ವ್ಯಾಪ್ತಿಯ ತಿರ್ಲಾ ಚೌಕ್ನಲ್ಲಿ ಇಂದು ನಡೆದಿದೆ.
ಆಲೂಗಡ್ಡೆ ತುಂಬಿದ ಟ್ರಕ್ವೊಂದು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಪಲ್ಟಿಯಾದ ಪರಿಣಾಮ ಈ ಅನಾಹುತ ಸಂಭವಿಸಿದೆ.
ಐದರಿಂದ ಎಂಟು ವರ್ಷದ ಮಕ್ಕಳು ಟ್ರಕ್ ಕೆಳಗೆ ಸಿಲುಕಿದ್ದು, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ತಕ್ಷಣಕ್ಕೆ ಅಲ್ಲಿದ್ದ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾದರು. ಘಟನೆಯಲ್ಲಿ ಆಟೋ ಚಾಲಕ ಕೂಡ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಉಳಿದಂತೆ ಜನರು ಗಾಯಗೊಂಡಿದ್ದಾರೆ.
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಆಘಾತಕ್ಕೀಡಾದ ಮಕ್ಕಳ ಕುಟುಂಬಸ್ಥರು ಮತ್ತು ಸ್ಥಳೀಯರು ಘಟನಾ ಸ್ಥಳದಲ್ಲಿ ಸುತ್ತಿವರೆದಿದ್ದು, ಅಸುನೀಗಿದ ಕಂದಮ್ಮಗಳ ಸಂಬಂಧಿಕರ ಆಕ್ರಂದನ ಮುಗಿಲುಮಟ್ಟಿತ್ತು. ಘಟನೆ ಖಂಡಿಸಿ, ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.