ಅಲ್ವಾರ್ (ರಾಜಸ್ಥಾನ): ಅಲ್ವಾರ್ ಜಿಲ್ಲೆಯ ದುಹಾರ್ ಚೋಪನ್ ಎಂಬ ಗ್ರಾಮದ ಮನೆಯೊಂದರಲ್ಲಿ ತಾಯಿ ಮತ್ತು ಆಕೆಯ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಮೃತರನ್ನು ಮಂಜು ದೇವಿ (35) ಮತ್ತು ಆಕೆಯ ಇಬ್ಬರು ಪುತ್ರಿಯರು ಹಾಗೂ ಪುತ್ರ ಎಂದು ಗುರುತಿಸಲಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ತನಗಾಜಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಜೇಶ್ ಮೀನಾ, ಬೆಳಗ್ಗೆ ಎಂಟು ಗಂಟೆಗೆ ಮೃತನ ಸಹೋದರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಮೃತರ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ವಿಷ ಸೇವಿಸಿದಂತೆ ಅಥವಾ ತಿನ್ನಿಸಿದಂತೆ ಬಾಸವಾಗುತ್ತಿದೆ. ಮೃತಳ ಪತಿ ಬೇರೊಂದು ಊರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಎಂದು ಗ್ರಾಮದ ಜನರು ತಿಳಿಸಿದ್ದಾರೆ.
ಈ ವೇಳೆ ಯಾವುದೋ ಕಾರಣಕ್ಕೆ ಪತಿ - ಪತ್ನಿಯ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಅಥವಾ ಕೊಲೆ ಮಾಡಿರಬಹುದಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೃತಳ ಅತ್ತೆಯ ಕಡೆಯಿಂದಲೂ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ: ಮಂಜು ದೇವಿ ಬೆಳಗ್ಗೆ ಎಷ್ಟೋತ್ತಾದರೂ ಬಾಗಿಲು ತೆರೆಯದೇ ಮನೆಯಿಂದ ಹೊರಬಾರದೆ ಇದ್ದಿದ್ದರಿಂದ ಅನುಮಾನ ಬಂದಿದೆ. ಬಳಿಕ ಕೊಠಡಿಯೊಂದರ ಕಿಟಕಿ ತೆರೆದು ನೋಡಿದಾಗ ನಾಲ್ವರು ಮಲಗಿರುವುದು ಕಂಡು ಬಂದಿದೆ. ಎಷ್ಟು ಕೂಗಿದರೂ ಏಳದೇ ಇದ್ದ ವೇಳೆ ವಿಷಯವನ್ನು ಆಕೆಯ ಸಹೋದರನಿಗೆ ತಿಳಿಸಲಾಗಿದೆ. ಬಳಿಕ ಆತ ಸ್ಥಳಕ್ಕೆ ಆಗಮಿಸಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನಾಲ್ವರು ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಮೃತರ ಕುಟುಂಬಸ್ಥರು ಅತ್ತೆಯ ಮನೆ ಕಡೆಯವರೆ ಈ ನಾಲ್ವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇರಳದಲ್ಲೂ ಇಂತಹದ್ದೇ ಘಟನೆ:ಕೇರಳದ ಕೊಟ್ಟಾಯಂನ ಅಕಲಕುನ್ನಂ ಪ್ರದೇಶದದ ಬಾಡಿಗೆ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ಐವರು ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಜೈಸನ್ ಎಂಬವರ ಕುಟುಂಬ ಸಾವಿಗೀಡಾಗಿದ್ದು, ಇದರಲ್ಲಿ 10 ವರ್ಷದೊಳಗಿನ ಮೂವರು ಮಕ್ಕಳೂ ಇದ್ದಾರೆ. ಜೈಸನ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ರಕ್ತದ ಕಲೆಗಳಲ್ಲಿ ಬಿದ್ದಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳ: ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ