ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಿಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ಎನ್‌ಐಎ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟ್ಟಿ, ಎನ್‌ಐಎ 17 ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದೆ ತಿಳಿಸಿದರು. ಇದೇ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಸದ್ದಾಂ ಹುಸೇನ್ ಎಂಬಾತನಿಗೆ ಕೇರಳ ಹೈಕೋರ್ಟ್ ಜಾಮೀನು ನಿರಾಕರಿಸಿದ್ದು, ಇದನ್ನು ಪ್ರಶ್ನಿಸಿ ಆತ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ಅರ್ಜಿಯೂ ವಿಚಾರಣೆಯಲ್ಲಿದೆ.
ಕೇರಳ ಹೈಕೋರ್ಟ್ ಜೂನ್ 25 ರಂದು ನೀಡಿದ ಆದೇಶದಲ್ಲಿ 17 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಒಂಬತ್ತು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 17 ಪ್ರತ್ಯೇಕ ವಿಶೇಷ ಅರ್ಜಿಗಳನ್ನು ಸಲ್ಲಿಸಲಾಗಿದೆ. ಎಲ್ಲವನ್ನೂ ಒಟ್ಟು ಮಾಡಿ ವಿಚಾರಣೆ ನಡೆಸುವಂತೆ ಪೀಠಕ್ಕೆ ಮನವಿ ಮಾಡಲಾಗಿದೆ ಎಂದು ಎನ್ಐಎ ವಕೀಲರು ತಿಳಿಸಿದರು.
26 ರ ಪೈಕಿ 17 ಮಂದಿಗೆ ಜಾಮೀನು:ಪ್ರಕರಣದಲ್ಲಿ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ಪಟ್ಟಿ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ಅನುಮತಿ ಪಡೆಯುವಂತೆ ಪೀಠವು ನಿರ್ದೇಶನ ನೀಡಿದೆ. ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಪ್ರಕರಣದ 26 ಆರೋಪಿಗಳು ಸಲ್ಲಿಸಿದ ಅರ್ಜಿಗಳ ಪೈಕಿ 17 ಮಂದಿಗೆ ಕಠಿಣ ಷರತ್ತುಬದ್ಧ ಜಾಮೀನು ನೀಡುವಂತೆ ಪೀಠವು ತಿಳಿಸಿತ್ತು.