ನವದೆಹಲಿ: 2010ರಲ್ಲಿ 1,936 ಸಹಾಯಕ ಸ್ಟೇಷನ್ ಮಾಸ್ಟರ್ ಮತ್ತು ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ರೈಲ್ವೆ ನೇಮಕಾತಿ ಮಂಡಳಿಯ ಮುಂಬಯಿ ಅಧ್ಯಕ್ಷ ಸತ್ಯೇಂದ್ರ ಮೋಹನ್ ಶರ್ಮಾ ಮತ್ತು ಇತರ 9 ಮಂದಿಗೆ ಹೈದರಾಬಾದ್ನ ಸಿಬಿಐ ವಿಶೇಷ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಸ್ಸಾನ್-ಮಂಗಳೂರು ರೈಲು ಅಭಿವೃದ್ಧಿ ನಿಗಮದ ಮಾಜಿ ಸಿಇಒ ಎ.ಕೆ.ಜಗನ್ನಾಧಮ್ ಕೂಡ ಶಿಕ್ಷೆಗೊಳಗಾದವರಲ್ಲಿ ಸೇರಿದ್ದಾರೆ. ನ್ಯಾಯಾಲಯವು ಶರ್ಮಾಗೆ 1.75 ಲಕ್ಷ ರೂ ಮತ್ತು ಜಗನ್ನಾಧಂ ಅವರಿಗೆ 1.31 ಲಕ್ಷ ರೂ ದಂಡ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ 10 ಅಪರಾಧಿಗಳಿಗೆ ಒಟ್ಟು 7.87 ಲಕ್ಷ ರೂ. ದಂಡ ವಿಧಿಸಲಾಗಿದೆ.
2010ರ ಜೂನ್ 15ರಂದು ರೈಲ್ವೆ ನೇಮಕಾತಿ ಮಂಡಳಿ ನಡೆಸಬೇಕಿದ್ದ 1,936 ಸಹಾಯಕ ಲೋಕೋ ಪೈಲಟ್ ಮತ್ತು ಸಹಾಯಕ ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಶರ್ಮಾ ಮತ್ತು ಜಗನ್ನಾಧಮ್ 2010 ರಲ್ಲಿ ಇತರ ಆರೋಪಿಗಳೊಂದಿಗೆ ಸೇರಿ 3.50 ಲಕ್ಷದಿಂದ 4.00 ಲಕ್ಷ ರೂ.ಗಳವರೆಗೆ ಹಣ ಪಡೆದು ಏಜೆಂಟರ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.
"ಈ ಪಿತೂರಿಯ ಭಾಗವಾಗಿ ಆರೋಪಿಗಳಾದ ಜಗನ್ನಾಧಮ್ ಶರೀನ್ ಕುಮಾರ್, ಪಿ. ಅಶೋಕ್ ಕುಮಾರ್; ಜಗನ್ನಾಧಮ್ ರಮೇಶ್, ಜಗನ್ನಾಧಮ್ ತಿರುಪತಯ್ಯ, ಮಂದಾರಮ ಶೇಷು ನಾರಾಯಣ ಮೂರ್ತಿ, ವಿವೇಕ್ ಭಾರದ್ವಾಜ್, ಸೃಜನ್ ಜಗನ್ನಾಥ್ ಮತ್ತು ಏಜೆಂಟರಾಗಿ ನೇಮಕಗೊಂಡ ಶ್ರೀರಾಮ ವಿಜಯ್ ಶಂಕರ್ ಅವರನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ. ಏಜೆಂಟರು ದೇಶಾದ್ಯಂತ ಹಲವಾರು ಆಕಾಂಕ್ಷಿಗಳನ್ನು ಸಂಪರ್ಕಿಸಿ ಸುಮಾರು 193 ಆಕಾಂಕ್ಷಿಗಳಿಂದ 5,000 ರಿಂದ 1,50,000 ರೂಪಾಯಿ ಪಡೆದು ಅವರಿಂದ ಮೂಲ ಅರ್ಹತಾ ಪ್ರಮಾಣಪತ್ರಗಳನ್ನು ಸಂಗ್ರಹಿಸಿದ್ದಾರೆ" ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.