ಬಿಕಾನೇರ್(ರಾಜಸ್ಥಾನ):ಮದುವೆ ಎಂಬುದು ಈ ಕಾಲದಲ್ಲಿ ಬಲು ದುಬಾರಿ ಕಾರ್ಯಕ್ರಮ. ಇದಕ್ಕಾಗಿ ಮನೆಯಲ್ಲಿ ಸಹೋದರರ ವಿವಾಹವನ್ನು ಒಟ್ಟಿಗೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬ ಅಜ್ಜ ತನ್ನ ಮೊಮ್ಮಕ್ಕಳ ವಿವಾಹವನ್ನು ಏಕಕಾಲಕ್ಕೆ ಮಾಡಿ ಮುಗಿಸಿದ್ದಾರೆ. ಅಸಲಿಗೆ ಹಸೆಮಣೆ ಏರಿದ ಜೋಡಿಯ ಸಂಖ್ಯೆಯೇ ಬೆರಗು ಮೂಡಿಸುತ್ತದೆ. ಅಜ್ಜನ ನೇತೃತ್ವದಲ್ಲಿ ಬರೋಬ್ಬರಿ 17 ಮೊಮ್ಮಕ್ಕಳು ತಮ್ಮ ಸಂಗಾತಿಯ ಜೊತೆಗೆ ಸಪ್ತಪದಿ ತುಳಿದಿದ್ದಾರೆ..!
ಇದು ನಂಬಲು ಅಚ್ಚರಿಯಾದರೂ ವಾಸ್ತವವಾಗಿ ನಡೆದ ಘಟನೆ. ರಾಜಸ್ಥಾನದ ಬಿಕಾನೇರ್ನಲ್ಲಿ ಈ ದೊಡ್ಡ ಮದುವೆ ಕಾರ್ಯಕ್ರಮ ನಡೆದಿದೆ. ನೂರಾರು ಬಂಧುಗಳು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಬಿಕಾನೇರ್ ಜಿಲ್ಲೆಯ ನೋಖಾ ಮಂಡಲದ ಲಾಲ್ಮದೇಸರ್ ಗ್ರಾಮದ ಸುರ್ಜಾರಾಮ್ ಗೋದಾರ್ ಮೊಮ್ಮಕ್ಕಳ ಮದುವೆ ಮಾಡಿಸಿದ ಅಜ್ಜಪ್ಪ. ಈತ ಆ ಗ್ರಾಮದ ಮುಖ್ಯಸ್ಥನೂ ಹೌದು.
ಇವರ ಕುಟುಂಬ ಈಗಲೂ ಒಟ್ಟಿಗೆ (ಅವಿಭಕ್ತ) ವಾಸಿಸುತ್ತಿದೆ. ತನ್ನ ಮಕ್ಕಳು, ಅವರ ಮಕ್ಕಳು (ಮೊಮ್ಮಕ್ಕಳು), ಮೊಮ್ಮಕ್ಕಳ ಮಕ್ಕಳು (ಮರಿಮಕ್ಕಳು) ಜೊತೆಯಾಗಿಯೇ ಜೀವನ ನಡೆಸುತ್ತಿದ್ದಾರೆ. ವಯಸ್ಸಿಗೆ ಬಂದ ಮೊಮ್ಮಕ್ಕಳಿಗೆ ಮದುವೆ ಮಾಡಿಸುವ ಪ್ರಸ್ತಾವ ಬಂದಾಗ, ಕೂಡುಕುಟುಂಬ ಇರುವ ಕಾರಣ ಪ್ರತ್ಯೇಕವಾಗಿ ಅಲ್ಲದೇ ಒಂದೇ ಬಾರಿಗೆ ವಿವಾಹ ಮಾಡಿಸುವ ಯೋಜನೆ ರೂಪಿಸಿದ್ದಾರೆ.
ಸುರ್ಜಾರಾಮ್ ಅವರು ತನ್ನ 17 ಮೊಮ್ಮಕ್ಕಳ ವಿವಾಹವನ್ನು ಒಂದೇ ಬಾರಿಗೆ ಮಾಡಿ ಮುಗಿಸಲು ನಿರ್ಧರಿಸಿದ್ದರು. ಯೋಜಿಸಿದಂತೆ ಎಲ್ಲರ ಮದುವೆಗಾಗಿ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದಾರೆ. ಬಳಿಕ ಬಂಧುಗಳಿಗೆ ಅದನ್ನು ನೀಡಿ, ಸೋಮವಾರ (ಏಪ್ರಿಲ್ 1) ಐವರು ಮೊಮ್ಮಕ್ಕಳ ಮದುವೆ ಮಾಡಿಸಿದ್ದಾರೆ. ಮರುದಿನ (ಏಪ್ರಿಲ್ 2) ಉಳಿದ 12 ಮೊಮ್ಮಕ್ಕಳ ವಿವಾಹ ಕಾರ್ಯಕ್ರಮ ಮುಗಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಗಮನ ಸೆಳೆದಿದೆ. ಒಂದೇ ಮನೆಯಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿರುವುದು ಇದೇ ಭಾಗದಲ್ಲಿ ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ:ಮದುವೆ ಸೀಸನ್ ಎಫೆಕ್ಟ್: ಹಳದಿ ಲೋಹದ ಬೆಲೆ ಬಲು ದುಬಾರಿ, ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ - Gold Rate
ಪೊಲೀಸರ ಕಣ್ಗಾವಲಿನಲ್ಲಿ ನಡೆದ ದರೋಡೆಕೋರ ಮದುವೆ!:ಇನ್ನೊಂದು ಪ್ರಕರಣದಲ್ಲಿ, 6 ಗಂಟೆಗಳ ಕಾಲ ಪೆರೋಲ್ ಪಡೆದು ಇಬ್ಬರು ದರೋಡೆಕೋರರು ಪೊಲೀಸರ ನಿಗಾದಲ್ಲಿ ವಿವಾಹವಾದರು. ಹರಿಯಾಣದ ಸಂದೀಪ್ ಅಲಿಯಾಸ್ ಕಲಾ ಜಥೇಡಿ ಮತ್ತು ರಾಜಸ್ಥಾನದ ಅನುರಾಧಾ ಚೌಧರಿ ಅಲಿಯಾಸ್ ಮೇಡಮ್ ಮಿಂಜ್ ಅವರ ವಿವಾಹವು ಮಾರ್ಚ್ 12 ರಂದು ದೆಹಲಿಯ ದ್ವಾರಕಾ ಸೆಕ್ಟರ್ -3 ರ ಸಂತೋಷ್ ಗಾರ್ಡನ್‌ನಲ್ಲಿ ನಡೆಯಿತು. ಇದಕ್ಕಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಮದುವೆ ನಡೆಯುವ ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್, ಬಾರ್‌ಕೋಡ್ ಬ್ಯಾಂಡ್‌ಗಳು, ವಾಹನಗಳಿಗೆ ಪ್ರವೇಶ ಪಾಸ್ ನೀಡಲಾಗಿತ್ತು. ಸಿಸಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳ ಮೂಲಕ ಅಲ್ಲಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿತ್ತು. 250ಕ್ಕೂ ಹೆಚ್ಚು ಪೊಲೀಸರ ನಿಗಾದಲ್ಲಿ ವಿವಾಹ ನಡೆದಿದೆ.