ತಿರುವನಂತಪುರಂ : ಮೇ 31 ರ ಶುಕ್ರವಾರದಂದು ಒಂದೇ ದಿನ ಕೇರಳ ಸರ್ಕಾರದ 16,000ಕ್ಕೂ ಹೆಚ್ಚು ನೌಕರರು ನಿವೃತ್ತರಾಗಲಿದ್ದಾರೆ. ನಿವೃತ್ತರಾಗುತ್ತಿರುವವರಲ್ಲಿ ವೈದ್ಯರು, ಪೊಲೀಸ್ ಅಧಿಕಾರಿಗಳು, ಶಿಕ್ಷಕರು, ಗುಮಾಸ್ತರು, ಚಾಲಕರು, ಜವಾನರು ಮತ್ತು ರಾಜ್ಯ ಸಚಿವಾಲಯ ಸೇರಿದಂತೆ ವಿವಿಧ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಇತರ ನೌಕರರು ಸೇರಿದ್ದಾರೆ.
ಕೇರಳದಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು 56 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ಕಾನೂನಿನ ಪ್ರಕಾರ ಮೇ ತಿಂಗಳಲ್ಲಿ ಹುಟ್ಟಿದ ಮತ್ತು 56 ವರ್ಷ ವಯಸ್ಸನ್ನು ತಲುಪಿದ ಎಲ್ಲರೂ ಮೇ 31 ರಂದು ನಿವೃತ್ತರಾಗುತ್ತಾರೆ. ಅದರಂತೆ ಈ ಬಾರಿ, 16,000 ಕ್ಕೂ ಹೆಚ್ಚು ಉದ್ಯೋಗಿಗಳು ಒಂದೇ ಸಮಯದಲ್ಲಿ ನಿವೃತ್ತರಾಗುತ್ತಿದ್ದಾರೆ.
ಇಷ್ಟೊಂದು ಜನ ನೌಕರರು ಒಂದೇ ದಿನ ನಿವೃತ್ತರಾಗುತ್ತಿರುವುದು ಏಕೆ ಎಂಬ ವಿಷಯ ಕುತೂಹಲಕಾರಿಯಾಗಿದೆ. ಹಲವಾರು ದಶಕಗಳ ಹಿಂದೆ ಮಕ್ಕಳು ಹುಟ್ಟಿದ ನಿಖರ ದಿನಾಂಕ ಅನೇಕ ಪೋಷಕರಿಗೆ ಗೊತ್ತೇ ಇರುತ್ತಿರಲಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಶಾಲಾ ಸೇರ್ಪಡೆಗೆ ಸೂಕ್ತವಾದ ದಿನಾಂಕವನ್ನೇ ಮಕ್ಕಳ ಹುಟ್ಟಿದ ದಿನವಾಗಿ ನಮೂದಿಸುತ್ತಿದ್ದರು. ಅದರಂತೆ ಈಗ ಜೂನ್ ಹತ್ತಿರಕ್ಕೆ ಮುಂಚಿನ ಜನ್ಮ ದಿನಾಂಕ ಹೊಂದಿರುವ 16 ಸಾವಿರ ನೌಕರರು ಒಂದೇ ದಿನ ನಿವೃತ್ತಿಯಾಗುತ್ತಿದ್ದಾರೆ. ಕಳೆದ ವರ್ಷ ಮೇ 31 ರಂದು 11,800 ಜನ ನೌಕರರು ನಿವೃತ್ತರಾಗಿದ್ದರು.