ಮುಂಬೈ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಸ್ ಉರುಳಿದ ಪರಿಣಾಮ ಮಹಾರಾಷ್ಟ್ರದ ಹಲವಾರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ 41 ಪ್ರಯಾಣಿಕರನ್ನು ಹೊತ್ತ ಬಸ್ ಶುಕ್ರವಾರ ಬೆಳಿಗ್ಗೆ ಪೋಖಾರಾದ ಪ್ರವಾಸಿ ರೆಸಾರ್ಟ್ನಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಚಲಿಸುತ್ತಿದ್ದಾಗ ನದಿಗೆ ಬಿದ್ದಿದೆ.
ಬಸ್ ದುರಂತದಲ್ಲಿ ಮಹಾರಾಷ್ಟ್ರದ ಕೆಲ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ನಲ್ಲಿ ಸುಮಾರು 41 ಪ್ರಯಾಣಿಕರು ಇದ್ದರು. ಅವರಲ್ಲಿ 14 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 17 ಜನ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇನ್ನೂ 11 ಜನ ಕಾಣೆಯಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ದೆಹಲಿಯ ನೇಪಾಳ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಜಲ್ಗಾಂವ್ನ ಜಿಲ್ಲಾಧಿಕಾರಿಗಳು ಭಾರತ-ನೇಪಾಳ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲಾಧಿಕಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರ ನೆರವಿಗೆ ಪ್ರಯತ್ನಿಸಲಾಗುತ್ತಿದೆ. ಬಸ್ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದ್ದರಿಂದ ಮಹಾರಾಜ್ ಗಂಜ್ ಕಲೆಕ್ಟರೇಟ್ನ ಒಂದಿಬ್ಬರು ಅಧಿಕಾರಿಗಳು ಸಹಾಯ ಮಾಡಲು ಗಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.