ಐಜ್ವಾಲ್ (ಮಿಜೋರಾಂ):ರೆಮಲ್ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಕಲ್ಲಿನ ಕ್ವಾರಿಯೊಂದು ಹಠಾತ್ ಕುಸಿದು 12 ಜನ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಹಲವರು ಕಾಣೆಯಾಗಿದ್ದು, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಸತತ ಮಳೆಯಿಂದಾಗಿ ಐಜ್ವಾಲ್‌ನ ಹೊರವಲಯದಲ್ಲಿ ದಕ್ಷಿಣ ಹೊರವಲಯದಲ್ಲಿರುವ ಮೆಲ್ತಮ್ ಮತ್ತು ಹಿಮ್ಲೆನ್ ನಡುವಿನ ಪ್ರದೇಶದಲ್ಲಿ ಕಲ್ಲು ಕ್ವಾರಿಯ ಕುಸಿತ ಉಂಟಾಗಿದೆ. ಪರಿಣಾಮ ಆರಂಭದಲ್ಲಿ ಏಳು ಜನ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿತ್ತು. ಆದರೆ, ಇದೀಗ ಆ ಸಂಖ್ಯೆ 12ಕ್ಕೆ ತಲುಪಿದೆ. ಇದುವರೆಗೆ ಹತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿಪತ್ತು ನಿರ್ವಹಣೆ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಹಲವರು ನಾಪತ್ತೆಯಾಗಿರುವ ಮಾಹಿತಿ ಕೂಡ ಇದೆ. ಪೊಲೀಸರು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕ್ವಾರಿ ಕುಸಿತದಿಂದ ಅಕ್ಕಪಕ್ಕದ ಹಲವು ಮನೆಗಳಿಗೆ ಹಾನಿಯಾಗಿದೆ. ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ನದಿಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ಹಾಗಾಗಿ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಮಿಜೋರಾಂ ಪೊಲೀಸ್ ಮಹಾನಿರ್ದೇಶಕ ಅನಿಲ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಭಾರೀ ಗಾಳಿ ಮಳೆಯಿಂದ ಹಲವಡೆ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ವಿವಿಧೆಡೆ ಭೂಕುಸಿತ ಕೂಡ ಸಂಭವಿಸಿರುವ ವರದಿ ಇದೆ. ಕೆಲವಡೆ ರಸ್ತೆ ಸಂಚಾರ ದುಸ್ತರವಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂಡಮಾರುತದಲ್ಲಿ ಸಿಲುಕಿದ ಸಂತ್ರಸ್ತರಿಗೆ ಸಹಾಯ ಮಾಡಲು ಸಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಲಾಲ್ದುಹೋಮ ಘೋಷಿಸಿದ್ದಾರೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೃತ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಅಲ್ಲದೇ ರೆಮಲ್ ಚಂಡಮಾರುತ ಹಾಗೂ ಸತತ ಮಳೆಯ ಹಿನ್ನೆಲೆ, ಎಲ್ಲ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಚೇರಿಗಳನ್ನು ಮುಚ್ಚಲು ಆದೇಶಿಸಿದೆ. ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ವಿದ್ಯುತ್, ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಮುಂತಾದ ಅಗತ್ಯ ಸೇವೆಗಳನ್ನು ಸಲ್ಲಿಸುವ ಕಚೇರಿಗಳನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ರಾಜ್ಯದ ವಿವಿಧೆಡೆ 40-50 kmph ನಿಂದ 35-45 kmph ವೇಗದಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಪ್ರತಿಕೂಲ ಹವಾಮಾನವು ಇಂದು ಸಂಜೆಯವರೆಗೆ ಮುಂದುವರಿಯುವ ನಿರೀಕ್ಷೆಯಿದ್ದು, ಅಗತ್ಯ ಇದ್ದಲ್ಲಿ ಮಾತ್ರ ಜನರು ಮನೆಯಿಂದ ಹೊರಬರುವಂತೆ ತಿಳಿಸಿದೆ.
ಇದನ್ನೂ ಓದಿ:ದೆಹಲಿ-ವಾರಣಾಸಿ ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ನಿರ್ಗಮನ ದ್ವಾರದಿಂದ ಹೊರಬಂದ ಪ್ರಯಾಣಿಕರು! - Bomb Threat To Flight