ಕರ್ನಾಟಕ

karnataka

ಚಿಕ್ಕೋಡಿ: ಅಂಗನವಾಡಿ, ಜಲ ಕುಂಭ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ಬಡ ರೈತ!

By ETV Bharat Karnataka Team

Published : Dec 2, 2023, 7:04 PM IST

Updated : Dec 2, 2023, 7:46 PM IST

ಹುಕ್ಕೇರಿಯ ಹರಗಾಪೂರ ಗ್ರಾಮದ ರೈತರೊಬ್ಬರು ಅಂಗನವಾಡಿ ಹಾಗೂ ಕುಡಿಯುವ ನೀರು ಪೂರೈಸುವ ಜಲ ಕುಂಭ ನಿರ್ಮಾಣಕ್ಕೆ ಭೂಮಿ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

Etv Bharatpoor-farmer-donated-his-land-for-free-to-construction-of-anganawadi
ಚಿಕ್ಕೋಡಿ: ಅಂಗನವಾಡಿ, ಜಲ ಕುಂಭ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ಬಡ ರೈತ!

ಅಂಗನವಾಡಿ, ಜಲ ಕುಂಭ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ರೈತ

ಚಿಕ್ಕೋಡಿ(ಬೆಳಗಾವಿ): ಆಸ್ತಿಗಾಗಿ ಅಣ್ಣ ತಮ್ಮಂದಿರೇ ದಾಯಾದಿಗಳಾಗಿರುವ ಮತ್ತು ತುಂಡು ಭೂಮಿಗಾಗಿ ಕೊಲೆಗಳೇ ನಡೆದಿರುವುದನ್ನು ನೀವು ನೋಡಿರುತ್ತೀರಾ ಮತ್ತು ಕೇಳಿರುತ್ತೀರಾ. ಆದರೆ, ಇತಂಹ ಕಾಲದಲ್ಲಿಯೂ ಬಡ ರೈತನೊಬ್ಬ ಗ್ರಾಮದ ಒಳಿತಿಗಾಗಿ ಜಮೀನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪೂರ ಗ್ರಾಮದ ಬಡ ರೈತ ಅಪ್ಪಣ್ಣಾ ಕಾನೂರೆ ಎಂಬುವರು ತಮಗಿದ್ದ ಅಲ್ಪ ಪ್ರಮಾಣದ ಒಂದು ಎಕರೆ ಜಮೀನಿನ ಶೇ.25ರಷ್ಟು ಭಾಗ ಅಂದರೆ 10 ಗುಂಟೆ ಜಮೀನನ್ನು ಗ್ರಾಮದ ದಲಿತ ಕಾಲೋನಿಯಲ್ಲಿ ಅಂಗನವಾಡಿ ಹಾಗೂ ಕುಡಿಯುವ ನೀರು ಪೂರೈಸುವ ಜಲ ಕುಂಭ ನಿರ್ಮಾಣಕ್ಕೆ ಉಚಿತವಾಗಿ ನೀಡಿದ್ದಾರೆ.

ಭೂಮಿ ದಾನ ಮಾಡಿದ ರೈತ ಅಪ್ಪಣ್ಣಾ ಕಾನೂರೆ ಮಾತನಾಡಿ, "ಹರಗಾಪೂರ ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಸರ್ಕಾರದಿಂದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಆದರೂ ಯೋಗ್ಯ ಜಾಗ ಇರದ ಕಾರಣ ಕಟ್ಟಡ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಬಡ ಮಕ್ಕಳ ಅನಕೂಲಕ್ಕಾಗಿ ಒಂದು ಎಕರೆ ಜಮೀನಿನಲ್ಲಿ 10 ಗುಂಟೆ ಜಾಗವನ್ನು ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಜಲ ಕುಂಭ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಗೆ ನೀಡಿದ್ದೇನೆ" ಎಂದರು.

"ಬಾಡಿಗೆ ಮನೆಯಲ್ಲಿ ಅಂಗನವಾಡಿ ಶಾಲೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿತ್ತು. ರಸ್ತೆ ಪಕ್ಕದಲ್ಲೇ ನನ್ನ ಜಮೀನು ಇದ್ದು, ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ಕುಟುಂಬದವರು ಈ ನಿರ್ಧಾರ ಕೈಗೊಂಡಿದ್ದೇವೆ. ಜೀವನದಲ್ಲಿ ಆಸ್ತಿ ಮಾಡಿದರೆ ನೆಮ್ಮದಿ ಸಿಗುವುದಿಲ್ಲ. ಮುಂದೆ ಅಂಗನವಾಡಿಗೆ ಸ್ಥಳ ನೀಡಿದರೆಂದು ನಮ್ಮ ಕುಟುಂಬದವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಒಂದಲ್ಲ ಒಂದು ದಿನ ಆಸ್ತಿ ಗಳಿಸಿದವನ್ನು ಮತ್ತು ಬಡವನ್ನು ಸಾಯಲೇಬೇಕು. ಆಸ್ತಿ ಮಾಡಿದವರು ತಮ್ಮ ಮಕ್ಕಳಿಗೆ ಆಸ್ತಿ ಬಿಟ್ಟು ಹೋಗುತ್ತಾರೆ. ನಾವು ಈ ಸಮಾಜಕ್ಕೆ ಬಿಟ್ಟು ಹೋಗುತ್ತೆ" ಎಂದು ಹೇಳಿದರು.

ಗ್ರಾಮಸ್ಥ ಅಣ್ಣಾಸಾಹೇಬ್ ಪಾಟೀಲ್ ಮಾತನಾಡಿ, "ಅಪ್ಪಣ್ಣಾ ಕಾನೂರೆ ಅವರು ಬಡವರು. ಅಂಗನವಾಡಿ ನಿರ್ಮಾಣ ಹಾಗೂ ಕುಡಿಯುವ ನೀರು ಪೂರೈಸುವ ಜಲ ಕುಂಭ ನಿರ್ಮಾಣ ಮಾಡುವುದಾದರೆ ಜಾಗ ಕೊಡುತ್ತೀನಿ ಎಂದರು. ಇದಕ್ಕೆ ಗ್ರಾಮ ಪಂಚಾಯಿತಿ ಒಪ್ಪಿಗೆ ಸೂಚಿಸಿತು. ಮೊನ್ನೆ ಗ್ರಾಮದ ಪರವಾಗಿ ಅವರಿಗೆ ಸನ್ಮಾನವನ್ನು ಮಾಡಿದ್ದೇವೆ. ಅಂಗನವಾಡಿ ಕಟ್ಟಡ ದುಸ್ಥಿತಿ ತಲುಪಿದೆ ಎಂದು ಶಾಸಕರ ಗಮನಕ್ಕೆ ತರಲಾಗಿತ್ತು. ಅದಕ್ಕೆ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ನೀವು ಜಾಗ ಕೊಟ್ಟರೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಪ್ರಸ್ತುತ ದಿನಗಳಲ್ಲಿ ಒಂದು ಗೇಣು ಜಾಗದ ವಿಚಾರಕ್ಕೂ ಜಗಳಗಳಾಗುತ್ತವೆ. ಆದರೆ, ಅಪ್ಪಣ್ಣಾ ಕಾನೂರೆ ಮುಂದು ಬಂದು ಜಾಗ ನೀಡಿದ್ದಾರೆ " ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರ್ಕಾರಿ ಶಾಲೆಗೆ ಭೂಮಿ ದಾನ, ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಕಿ ಈ ಹುಚ್ಚಮ್ಮ; ಸಮಾಜ ಸೇವಕಿಗೆ ಅರಸಿ ಬಂತು ರಾಜ್ಯೋತ್ಸವ ಪ್ರಶಸ್ತಿ

Last Updated : Dec 2, 2023, 7:46 PM IST

ABOUT THE AUTHOR

...view details