ನವದೆಹಲಿ: ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ಕಟ್ಟಡದ ನೆಲಮಾಳಿಗೆಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ದೆಹಲಿ ಮುನ್ಸಿಪಾಲಿಟಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಕ್ರಮವಾಗಿ ನಡೆಸುತ್ತಿದ್ದ 13 ಕೋಚಿಂಗ್ ಸೆಂಟರ್‌ಗಳನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ನಿಯಮಾವಳಿಗೆ ವಿರುದ್ಧವಾಗಿ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿರುವುದು ಕಂಡುಬಂದಿದ್ದು, ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗಿದೆ.
ಮತ್ತೊಂದೆಡೆ, ಕೋಚಿಂಗ್ ಕೇಂದ್ರದಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಾಲಿಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸುವಂತೆ ಎನ್ಜಿಒವೊಂದು ಅರ್ಜಿಯಲ್ಲಿ ಒತ್ತಾಯಿಸಿದೆ.
14 ದಿನಗಳ ನ್ಯಾಯಾಂಗ ಬಂಧನ: ರಾವ್ಸ್ ಕೋಚಿಂಗ್ ಸೆಂಟರ್‌ನಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕೋಚಿಂಗ್ ಸೆಂಟರ್‌ನ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಕೋಚಿಂಗ್ ಸೆಂಟರ್‌ನ ಸಂಯೋಜಕ ದೇಶಪಾಲ್ ಸಿಂಗ್ ಅವರನ್ನು ನರಹತ್ಯೆ ಮತ್ತು ಇತರ ಆರೋಪಗಳ ಮೇಲೆ ಬಂಧಿಸಲಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ವಿಧಿಸಿದೆ.
ದಾಖಲೆಗಳಲ್ಲಿ ಸ್ಟೋರ್ ರೂಂ, ಇರುವುದು ಗ್ರಂಥಾಲಯ: ನೆಲಮಹಡಿಯಲ್ಲಿ ವಾಹನ ನಿಲುಗಡೆ ಮತ್ತು ವಸ್ತುಗಳ ಸಂಗ್ರಹಣೆ ಹೆಸರಿನಲ್ಲಿ ಅನುಮತಿ ಪಡೆದು ಅಕ್ರಮವಾಗಿ ಗ್ರಂಥಾಲಯ ನಡೆಸಲಾಗುತ್ತಿದೆ. ಆರೋಪಿ ಅಭಿಷೇಕ್ ಗುಪ್ತಾ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ಎಂ.ಹರ್ಷವರ್ಧನ್ ತಿಳಿಸಿದರು.
'ತನಿಖೆಗೆ ಸಹಕರಿಸುತ್ತೇವೆ': ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಘಟನೆ ನಮ್ಮನ್ನು ಬೆಚ್ಚಿಬೀಳಿಸಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದೆ.
ಮತ್ತೊಂದೆಡೆ, ಆಡಳಿತದ ನಿರ್ಲಕ್ಷ್ಯಕ್ಕೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.