ಹೈದರಾಬಾದ್: ಸಾಮಾಜಿಕ ಜಾಲತಾಣಗಳ ರೀಲ್ಸ್ ಎಂಬ ಮಾಯಾಜಾಲ ಯುವಜನತೆಯನ್ನು ಮರುಳಾಗಿಸುತ್ತದೆ. ರೀಲ್ಸ್ ಎಂಬ ಗೀಳಿಗೆ ಸಿಲುಕುತ್ತಿರುವ ಮಂದಿ ಅಡ್ಡ ದಾರಿ ಹಿಡಿದು ಪ್ರಾಣಕ್ಕೆ ಕುತ್ತು ತಂದೊಡ್ಡಿಕೊಳ್ಳುತ್ತಿದ್ದಾರೆ.
ಇಲ್ಲಿನ ಬೆಗಂಪೇಟ್ನಲ್ಲಿ ಇಬ್ಬರು ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಇನ್ಸ್ಟಾಗ್ರಾಂನ ರೀಲ್ಸ್ ಮಾಡುವ ಉದ್ದೇಶದಿಂದ ದುಬಾರಿ ಬೆಲೆಯ ದ್ವಿಚಕ್ರ ವಾಹನ ಕದಿಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಅದೇ ರೀತಿ ಹಯತ್ನಗರದಲ್ಲಿ ರೀಲ್ಸ್ಗಾಗಿ ಬೈಕ್ ಸ್ಟಂಟ್ ಮಾಡುತ್ತಿದ್ದ ಇಬ್ಬರು ಯುವಕರು ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಂಡ ಹೆಂಡ್ತಿ ಜಗಳದಲ್ಲಿ ಮಗು ಅನಾಥ; ಇದೇ ರೀತಿ ರೀಲ್ಸ್ ಗೀಳಿನಿಂದ ಗೃಹಿಣಿಯೊಬ್ಬಳು ಅಡುಗೆ ಮಾಡದೇ, ಗಂಡ ಮತ್ತು ಮಗುವನ್ನು ನಿರ್ಲಕ್ಷ್ಯ ಮಾಡಿ ಸದಾ ಇದರಲ್ಲೇ ಮಗ್ನಳಾಗಿದ್ದಳು. ಇದರಿಂದ ರೊಚ್ಚಿಗೆದ್ದ ಗಂಡ ಆಕೆಯನ್ನು ಕೊಂದು ಜೈಲು ಸೇರಿದ್ದಾನೆ. ಇದೀಗ ಎರಡು ವರ್ಷದ ಕಂದಮ್ಮ ಅನಾಥವಾಗಿದ್ದು, ಸರ್ಕಾರಿ ಆಶ್ರಯ ತಾಣ ಸೇರಿದೆ.
ಅನೇಕ ಮಂದಿ ಕ್ಷಣಿಕ ಸಂತೋಷಕ್ಕಾಗಿ ಹಲವು ಕ್ರೇಜಿ ರೀಲ್ಸ್ ಮಾಡಿ, ಪೋಷಕರನ್ನು ಕಣ್ಣೀರು ಹಾಕಿಸಿರುವ ಘಟನೆಗಳು ಇವೆ. ಯಾವುದೇ ವಿಷಯವಿದ್ದರೂ ಪರವಾಗಿಲ್ಲ. ತಮ್ಮ ವಿಡಿಯೋಗಳು ರಾತ್ರೋರಾತ್ರಿ ವೈರಲ್ ಆಗಿ ತಾವು ಸ್ಟಾರ್ ಆಗಬೇಕು ಎಂಬುದು ಮಾತ್ರ ಇವರ ಉದ್ದೇಶವಾಗಿದೆ. ಇದರ ಜೊತೆಗೆ ಫಾಲೋವರ್ಗಳು ಹೆಚ್ಚಾದರೆ, ಹಣವನ್ನು ಗಳಿಸಬಹುದು. ಇದರಿಂದ ಎಲ್ಲರಿಗಿಂತ ವಿಶೇಷವಾಗಿ ನೀವು ಕಾಣುತ್ತೀರ. ಇದೇ ಉದ್ದೇಶದಿಂದ ಸಾಮಾಜಿಕ ಜಾಲತಾಣದ ರೀಲ್ಸ್ ಹುಚ್ಚಿಗೆ ಬಿದ್ದ ಮಂದಿ ಹೊಸ ಹೊಸ ಅಪರಾಧ ಕೆಟ್ಟ ಕಾರ್ಯಗಳಿಗೆ ಮುಂದಾಗುತ್ತಿದ್ದಾರೆ. ಅಪಾಯದ ಸಾಹಸಗಳಿಂದ ಇಡೀ ಕುಟಂಬವನ್ನೇ ದುಃಖಕ್ಕೆ ದೂಡುತ್ತಿದ್ದಾರೆ.
ಆಲ್ಕೋಹಾಲ್ ಮತ್ತು ಗ್ಯಾಬ್ಲಿಂಗ್ ರೀತಿ ಚಟ: ಮನೋವಿಜ್ಞಾನಿಗಳು ಹೇಳುವಂತೆ ಮದ್ಯ ಮತ್ತು ಜೂಜಿನ ಚಟದಂತೆಯೇ ಸಾಮಾಜಿಕ ಜಾಲತಾಣದ ಗೀಳು ಹೆಚ್ಚುತ್ತಿದೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಧದಲ್ಲಿ ತಾವು ವಿಶೇಷವಾಗಿ ಗುರುತಿಸಿಕೊಳ್ಳಬೇಕು ಎಂಬ ಚಟ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದಾಕ್ಷಣ ಲೈಕ್ ಬರದೇ ಹೋದಲ್ಲಿ ಅವರು ಒತ್ತಡಕ್ಕೆ ಒಳಗಾಗುತ್ತಾರೆ.
ಶಾಲಾ ಮಕ್ಕಳಿಂದ ಹದಿವಯಸ್ಸಿನವರು ಬಲಿ; 15 ರಿಂದ 25 ವರ್ಷದೊಳಗಿನವರು ಇಂತಹ ಸಾಮಾಜಿಕ ಜಾಲತಾಣದ ಗೀಳಿಗೆ ಒಳಗಾಗುತ್ತಾರೆ. ಇದರಿಂದ ಅವರು ಬೈಕ್ ಸ್ಟಂಟ್ ವೇಳೆ ಅಪಘಾತಕ್ಕೆ ಒಳಗಾಗುವುದು. ರೈಲು ಬರುವಾಗ ಒಬ್ಬರೇ ನಿಲ್ಲುವುದು. ಸೆಲ್ಫಿಗಾಗಿ ಕುಣಿಕಿಗೆ ತಲೆಯೊಡ್ಡುವಂತಹ ದುಸ್ಸಾಹಸ ಮಾಡುತ್ತಾರೆ. ದಕ್ಷಿಣ ಕೇಂದ್ರ ರೈಲ್ವೆ ಪ್ರಕಾರ ವರ್ಷಕ್ಕೆ 500 ರಿಂದ 700 ಜನರು ರೈಲು ದುರಂತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಶೇ 10ರಷ್ಟು ಮಂದಿ ರೈಲಿನ ಬಾಗಿಲು ಮುಂದೆ ನಿಂತು ವಿಡಿಯೋ, ಸೆಲ್ಫಿ ಪಡೆಯಲು ಹೋಗಿ ಜಾರಿ ಬಿದ್ದು ಅಥವಾ ಕಂಬಗಳಿಗೆ ಹೊಡೆದುಕೊಂಡು ಸಾಯುತ್ತಿದ್ದಾರೆ.
ದಂಪತಿಗಳ ಮಧ್ಯೆ ಬಿರುಕು: ಕೆಲವು ಕ್ರೇಜಿ ರೀಲ್ಸ್ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಪೊಲೀಸರ ಪ್ರಕಾರ, ಮಹಿಳೆಯರು ಕುಟುಂಬದ ಕಾಳಜಿ ಮರೆತು ಇಂತಹ ಗೀಳಿಗೆ ಹೆಚ್ಚು ಒಳಗಾಗುತ್ತಿದ್ದಾರೆ. ಇತ್ತೀಚಿಗೆ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಗಂಡನಿಂದ ಕಿರುಕುಳದ ಕುರಿತು ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ ಹೆಂಡತಿ, ಮಕ್ಕಳು, ಮನೆ ನಿರ್ಲಕ್ಷ್ಯಿಸಿ ರೀಲ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಗಂಡ ಬೇಸತ್ತು ಗದರಿದಾಗ ಆಕೆ ಆತನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿರುವುದು ಕಂಡುಬಂದಿದೆ.
ಡಿಜಿಟಲ್ ಸಾಕ್ಷರತೆ ಅಗತ್ಯತೆ: ಮನೋವೈದ್ಯೆ ಗೌತಮಿ ನಾಗಭೈರವ್ ಹೇಳುವಂತೆ ಡಿಜಿಟಲ್ ಸಾಕ್ಷರತೆ ಕೊರತೆ ಕೂಡ ಸಾಮಾಜಿಕ ಜಾಲತಾಣದ ಚಟಕ್ಕೆ ಕಾರಣವಾಗಿದೆ. ಮತ್ತೊಂದು ಸಮಸ್ಯೆ ಎಂದರೆ ಪ್ರತಿಯೊಬ್ಬರಿಗೂ ಜನರು ತಮ್ಮನ್ನು ಗುರುತಿಸಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಗೀಳು ತಡೆಯಬೇಕು ಎಂದರೆ, ಅದನ್ನು ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡಬೇಕು. ಮಕ್ಕಳ ಕೈಗೆ ಫೋನ್ ಕೊಟ್ಟಾಗ ಅವರಿಗೆ ಅಗತ್ಯವಿರುವಷ್ಟು ಮಾತ್ರ ವೀಕ್ಷಿಸಬೇಕು. ಆ ರೀತಿ ಮಿತಿ ನಿಗದಿಸಬೇಕು. ಕುಟುಂಬದ ಸದಸ್ಯರು ಅತಿ ಹೆಚ್ಚು ಮೊಬೈಲ್ ನೋಡಿದಾಗ ಈ ಮಿತಿ ಕುರಿತು ಸ್ಪಷ್ಟನೆ ನೀಡಬೇಕು ಎನ್ನುತ್ತಾರೆ.
ಇದನ್ನೂ ಓದಿ: ರೀಲ್ಸ್ ಹುಚ್ಚು: ನೇಣು ಕುಣಿಕೆ ಬಿಗಿಯಾಗಿ ಬಾಲಕ, ಬೈಕ್ ಸ್ಟಂಟ್ನಲ್ಲಿ ಯುವಕ ಸಾವು