ಪೇಶಾವರ(ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ಕುರ್ರಂ ಜಿಲ್ಲೆಯಲ್ಲಿ ಭಾನುವಾರ ತುಂಡು ಭೂಮಿಗೆ ಸಂಬಂಧಿಸಿ ಎರಡು ಬುಡಕಟ್ಟು ಗುಂಪುಗಳ ನಡುವೆ ಭೀಕರ ಸಶಸ್ತ್ರ ಸಂಘರ್ಷ ನಡೆದಿದೆ. ಪರಿಣಾಮ, ಕನಿಷ್ಠ 36 ಜನರು ಸಾವನ್ನಪ್ಪಿದ್ದು, 162ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪ್ಪರ್ ಕುರ್ರಂ ಜಿಲ್ಲೆಯ ಬೊಶೇರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಘರ್ಷಣೆಗಳು ಪ್ರಾರಂಭವಾಗಿದ್ದವು. ಈ ಗ್ರಾಮ ಹಿಂದೆಯೂ ಬುಡಕಟ್ಟುಗಳು ಮತ್ತು ಧಾರ್ಮಿಕ ಗುಂಪುಗಳ ನಡುವೆ ಮಾರಣಾಂತಿಕ ಘರ್ಷಣೆಗಳನ್ನು ಕಂಡಿದೆ. ಇದರ ಜೊತೆಗೆ, ಕೋಮು ಘರ್ಷಣೆ ಮತ್ತು ಭಯೋತ್ಪಾದಕ ದಾಳಿಗಳೂ ಇಲ್ಲಿ ವರದಿಯಾಗಿವೆ.
ಅಧಿಕಾರಿಗಳು, ಬುಡಕಟ್ಟು ಸಮುದಾಯಗಳ ಹಿರಿಯರು, ಮಿಲಿಟರಿ, ಪೊಲೀಸ್ ಮತ್ತು ಜಿಲ್ಲಾಡಳಿತದ ಸಹಾಯದಿಂದ ಕೆಲ ದಿನಗಳ ಹಿಂದೆ ಶಿಯಾ ಮತ್ತು ಸುನ್ನಿ ಗುಂಪುಗಳ ನಡುವೆ ಬೋಶೆರಾ, ಮಲಿಕೆಲ್ ಮತ್ತು ದುಂಡಾರ್ ಪ್ರದೇಶಗಳಲ್ಲಿ ಒಪ್ಪಂದ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೀವಾರ್, ತಂಗಿ, ಬಲಿಶ್ಖೇಲ್, ಖಾರ್ ಕಲಾಯ್, ಮಕ್ಬಾಲ್, ಕುಂಜ್ ಅಲಿಜೈ, ಪಾರಾ ಚಮ್ಕಾನಿ ಮತ್ತು ಕರ್ಮಾನ್ ಸೇರಿದಂತೆ ಇತರ ಹಲವು ಪ್ರದೇಶಗಳಲ್ಲಿ ಘರ್ಷಣೆ ನಡೆದಿದೆ. ಜನರು ಪರಸ್ಪರ ಮಾರ್ಟರ್ ಶೆಲ್ ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ ಭಾರೀ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಕುರ್ರಂನ ಪ್ರಮುಖ ನಗರಗಳಾದ ಪರಚಿನಾರ್ ಮತ್ತು ಸದ್ದಾ ಮೇಲೆಯೂ ಮಾರ್ಟರ್ ಮತ್ತು ರಾಕೆಟ್ ಶೆಲ್‌ಗಳನ್ನು ಹಾರಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮುಖ್ಯರಸ್ತೆಗಳಲ್ಲಿ ಹಗಲು ಹೊತ್ತು ಸಂಚಾರ ಬಂದ್ ಮಾಡಲಾಗಿದೆ. ಹಿಂಸಾಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭೀಕರ ಹತ್ಯೆಯಲ್ಲಿ ಕೊನೆಗೊಂಡ ಸಾಲ ವ್ಯವಹಾರ! ವೃದ್ಧೆಯನ್ನು ಕತ್ತರಿಸಿ ಕಾಲುವೆಗೆಸೆದ ದಂಪತಿ - Tamil Nadu Brutal Murder