ಬೆಂಗಳೂರು: ಜಗತ್ತು ಡಿಜಿಟಲೀಕರಣವಾಗಿ ಮುಂದುವರೆಯುತ್ತಿದೆ. ಜನ ಎಲ್ಲ ಆನ್ಲೈನ್‌ನಲ್ಲಿ ಯುಪಿಐ ಬಳಕೆ ಮಾಡಿ ಪಾವತಿ ಮಾಡಲಾಗುತ್ತಿದೆ. ಆದರೆ, ಏಕೆ ಯುಪಿಐ ಪಾವತಿಗೆ ಅವಕಾಶ ನೀಡುತ್ತಿಲ್ಲ ಎಂಬುದರ ಕುರಿತಂತೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ(ಬೆಸ್ಕಾಂ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದ್ಯುತ್ ಸರಬರಾಜು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ಹಾಗೂ ಪ್ರಿಪೇಯ್ಡ್ ಮೀಟರ್ ಕೊಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಹೊಸಕೋಟೆ ನಿವಾಸಿ ಸೀತಾಲಕ್ಷ್ಮೀ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಇಡೀ ಜಗತ್ತು ಡಿಜಿಟಲೀಕರಣ ಆಗಿರುವಾಗ, ನೀವು ಮಾತ್ರ ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 9ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದರು.
ವಾಣಿಜ್ಯ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದ್ದರಿಂದ ವಿದ್ಯುತ್ ಹೊರೆ ಸಾಮರ್ಥ್ಯ ಪ್ರಮಾಣವನ್ನು ಹೆಚ್ಚಿಸುವಂತೆ ಅರ್ಜಿದಾರರು ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ್ದರು. ಅದಕ್ಕೆ 16 ಸಾವಿರ ರೂ. ಪಾವತಿಸುವಂತೆ ಎಂಜಿನಿಯರ್ ತಿಳಿಸಿದ್ದರು. ಅದರಂತೆ ಅರ್ಜಿದಾರರು ನಗದು ಹಣ ಪಾವತಿಸಲು ಕಚೇರಿಗೆ ತೆರಳಿದಾಗ ಡಿಡಿ ಅಥವಾ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಲು ತಿಳಿಸಲಾಗಿತ್ತು. ತಮಗೆ 65 ವರ್ಷ ವಯಸ್ಸಾಗಿದ್ದು, ಓಡಾಡಲು ಸಾಧ್ಯವಿಲ್ಲ, ಹಾಗಾಗಿ ಆನ್‌ಲೈನ್ ಮೂಲಕ ಹಣ ಪಾವತಿಸುವುದಾಗಿ ಅರ್ಜಿದಾರರು ಹೇಳಿದ್ದರು. ಅದಕ್ಕೆ ಅವಕಾಶವಿಲ್ಲ ಎಂದು ಎಂಜಿನಿಯರ್ ತಿಳಿಸಿದ್ದರು. ಸಾಕಷ್ಟು ಬಾರಿ ಪ್ರಯತ್ನಪಟ್ಟು ಅರ್ಜಿದಾರರು ಅಂತಿಮವಾಗಿ ಪ್ರಿಪೇಯ್ಡ್ ಮೀಟರ್ ನೀಡುವಂತೆ ಮನವಿ ಮಾಡಿದ್ದರು. ಅದನ್ನು ಸಹ ಅಧಿಕಾರಿಗಳು ಒಪ್ಪಲಿಲ್ಲ. ಈ ಮನವಿ ಪರಿಗಣಿಸುವಂತೆ ಹಿಂದೆ ನ್ಯಾಯಾಲಯ ಹೇಳಿತ್ತು. ಅಷ್ಟಿದ್ದರೂ, ಅರ್ಜಿದಾರರ ಮನವಿ ಪರಿಗಣಿಸಿರಲಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿತ್ತು. ಅಂತಿಮವಾಗಿ ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ವಿದ್ಯುತ್ ಸರಬರಾಜು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ಹಾಗೂ ಪ್ರಿಪೇಯ್ಡ್ ಮೀಟರ್ ಕೊಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಹೊರಡಿಸಿದ ಆದೇಶವನ್ನು ರದ್ದುಪಡಿಸಬೇಕು. ಪ್ರಿಪೇಯ್ಡ್ ಮೀಟರ್ ನೀಡಬೇಕು, ಆರ್‌ಬಿಐ ಮಾರ್ಗಸೂಚಿ ಹಾಗೂ ಕೆಇಆರ್‌ಸಿ ನಿಯಮಗಳ ಪ್ರಕಾರ ಯುಪಿಐ, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವಂತೆ ಬೆಸ್ಕಾಂ ಹಾಗೂ ಇತರ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.