ಕರ್ನಾಟಕ

karnataka

ಸಂಸದರಿಗೆ ನೀಡಿದ ಸಂವಿಧಾನ ಪ್ರತಿಯ ಪೀಠಿಕೆಯಿಂದ 'ಜಾತ್ಯಾತೀತ', 'ಸಮಾಜವಾದ' ಪದ ತೆಗೆದಿರುವುದು ಖಂಡನೀಯ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Sep 22, 2023, 6:49 AM IST

ಸಂವಿಧಾನ ಪ್ರತಿಯ ಪೀಠಿಕೆಯಿಂದ 'ಜಾತ್ಯತೀತ' ಮತ್ತು 'ಸಮಾಜವಾದ' ಪದಗಳನ್ನು ತೆಗೆದಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರ್ಕಾರ ನೀಡಿರುವ ಸಂವಿಧಾನದ ಪ್ರತಿಯ ಪೀಠಿಕೆಯಿಂದ 'ಜಾತ್ಯತೀತ' ಮತ್ತು 'ಸಮಾಜವಾದ' ಪದಗಳನ್ನು ಕಿತ್ತು ಹಾಕಿರುವುದು ಭಾರತೀಯ ಜನತಾ ಪಕ್ಷದ ಅಂತರಂಗದಲ್ಲಿ ಸಂವಿಧಾನದ ಬಗೆಗಿರುವ ಅಸಹನೆಗೆ ಸಾಕ್ಷಿ. ಇದು ಅತ್ಯಂತ ಖಂಡನೀಯ ಕೃತ್ಯ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 1949ರ ಸಂವಿಧಾನದ ಪ್ರತಿಯನ್ನೇ ನೀಡಲಾಗಿದೆ ಎನ್ನುವುದು ತಮ್ಮೊಳಗಿನ ದುಷ್ಟ ಆಲೋಚನೆಯನ್ನು ಮುಚ್ಚಿಕೊಳ್ಳುವ ಪ್ರಯತ್ನ. ತಿದ್ದುಪಡಿಯಾದ ನಂತರ ಪರಿಷ್ಕೃತ ಪ್ರತಿಯನ್ನು ನೀಡಬೇಕಾಗಿರುವುದು ನ್ಯಾಯವೂ ಹೌದು, ಧರ್ಮವೂ ಹೌದು. 1972ರಲ್ಲಿಯೇ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ 'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು ಸೇರಿಸಲಾಗಿತ್ತು. ಈ ಪದಗಳನ್ನು ಕಿತ್ತು ಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನದ ಬಗ್ಗೆ ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆ ಆರ್​​ಎಸ್​​ಎಸ್​​ಗೆ ಇರುವ ವಿರೋಧಕ್ಕೆ ಇತಿಹಾಸ ಸಾಕ್ಷಿ. ಸಂವಿಧಾನವನ್ನು ದೇಶ ಒಪ್ಪಿಕೊಂಡ ಕಾಲದಲ್ಲಿಯೇ ಆರ್​​ಎಸ್​​ಎಸ್ ಅದನ್ನು ವಿರೋಧಿಸಿತ್ತು. ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮರೆಯಲಾಗದು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನವನ್ನು ಪುನರ್ ಪರಿಶೀಲನೆಗೊಳಪಡಿಸುವ ವಿಫಲ ಪ್ರಯತ್ನ ನಡೆದಿರುವುದನ್ನು ದೇಶದ ಜನತೆ ಮರೆತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದ ಕಾಲದಲ್ಲಿ ಬಿಜೆಪಿ ನಾಯಕರು ಮತ್ತು ಸಂಸದರು ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿದ್ದಕ್ಕೆ ದೇಶ ಸಾಕ್ಷಿಯಾಗಿದೆ ಎಂದಿದ್ದಾರೆ.

ಸಂವಿಧಾನವನ್ನು ಬದಲಾಯಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತ್‌ ಕುಮಾರ್ ಹೆಗಡೆ ಎಂಬ ರಾಜ್ಯದ ಸಂಸದ ನೀಡಿದ್ದ ಬೇಜವಾಬ್ದಾರಿ ಹೇಳಿಕೆಯನ್ನು ಕನಿಷ್ಠ ಖಂಡಿಸುವ ಇಲ್ಲವೇ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನೂ ನರೇಂದ್ರ ಮೋದಿ ಸರ್ಕಾರ ಮಾಡದೆ ಇರುವುದು ಆ ಪಕ್ಷದ ಅಂತರಂಗದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ನೇರಾನೇರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಧೈರ್ಯ ಇಲ್ಲದ ಬಿಜೆಪಿ ಮತ್ತು ಕೇಂದ್ರ ಸರ್ಕಾರ, ಈ ರೀತಿ ಅಡ್ಡದಾರಿ ಹಿಡಿದು ಸಂವಿಧಾನದ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದ ಭಾಗವಾಗಿಯೇ ಈ ಎಲ್ಲ ಕಸರತ್ತುಗಳು ನಡೆಯುತ್ತಿರುವಂತೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನ ವಿರೋಧಿ ಶಕ್ತಿಗಳಿಂದ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ABOUT THE AUTHOR

...view details