ದಾವಣಗೆರೆ: ಇಲ್ಲಿನ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿಗೆ ಬಂಪರ್ ಬೆಲೆ ಬಂದಿದೆ. ಏಲಕ್ಕಿ ಬಾಳೆ ಒಂದು ಕೆ.ಜಿಗೆ 130 ರೂಪಾಯಿ, ಪಚ್ಚಬಾಳೆ ಕೆ.ಜಿಗೆ 80 ರೂಪಾಯಿ ಇದೆ. ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಉತ್ತಮ ಬೆಲೆ ಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕೆ.ಜಿಗೆ 20ರಿಂದ 25 ರೂಪಾಯಿ ದರ ಇತ್ತು. ಆದರೀಗ ಏಲಕ್ಕಿ ಬಾಳೆ ಒಂದು ಕೆ.ಜಿಗೆ 120 ರೂಪಾಯಿ ದಾಟಿದೆ. ಸಗಟುದಾರರು ರೈತರಿಂದ 1 ಕೆ.ಜಿ ಹಸಿ ಬಾಳೆಗೆ 60-80 ರೂಪಾಯಿಗೆ ಖರೀದಿಸಿ 120 ರೂಪಾಯಿಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಪಚ್ಚ ಬಾಳೆಗೆ ಕೇವಲ ಕೆ.ಜಿಗೆ 20 ರೂಪಾಯಿ ಇತ್ತು. ಆದರೆ ಇಳುವರಿ ಬಾರದೆ ಬಾಳೆ ಮಾರುಕಟ್ಟೆಗೆ ಬಾರದ ಕಾರಣ ಇದೀಗ ಕೆ.ಜಿಗೆ 80 ರೂಪಾಯಿ ಮೀರಿದೆ.
ದಾವಣಗೆರೆಯಲ್ಲಿ ಬಾಳೆ ಬೆಳೆ ಕುಸಿತ ಕಂಡಿರುವುದರಿಂದ ಮಂಡ್ಯ, ಮೈಸೂರು, ಮದ್ದೂರು, ಸಾಗರ, ತಮಿಳುನಾಡಿನಿಂದ ಬಾಳೆ ಮಾರುಕಟ್ಟೆಗೆ ಆಮದಾಗುತ್ತಿದೆ.
ರೈತರ ಹೇಳಿಕೆಗಳು: ರೈತ ಭರಮಣ್ಣ ಪ್ರತಿಕ್ರಿಯಿಸಿ, "ಇಳುವರಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಒಂದು ಬಾಳೆ ಗೊನೆಗೆ 150 ಖರ್ಚು ಮಾಡಿದ್ದೇವೆ. ಹೆಚ್ಚು ಮಳೆ ಸುರಿದಿದ್ದರಿಂದ ಶೀತಕ್ಕೆ ಗೊನೆಗಳು ಚಿಕ್ಕದಾಗಿವೆ. ಒಂದು ಕೆ.ಜಿ ಏಲಕ್ಕಿ ಬಾಳೆಗೆ 60 ರೂಪಾಯಿಯಂತೆ ಕೊಡುತ್ತಿದ್ದೇವೆ. ಸಗಟುದಾರರು ಕೆ.ಜಿಗೆ 110-120 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಮಳೆ ಕಾಟದಿಂದ ಫಸಲು, ತೂಕಕ್ಕೂ ಹೊಡೆತ ಬಿದ್ದಿದೆ" ಎಂದರು.
ತಮಿಳುನಾಡಿನ ಬಾಳೆಗೆ ಬೇಡಿಕೆ: ಬಾಳೆ ವ್ಯಾಪಾರಿ ನಬೀ ಸಾಬ್ ಮಾತನಾಡಿ, "ದಾವಣಗೆರೆ ಜಿಲ್ಲೆಯಾದ್ಯಂತ ಬಾಳೆ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ತಮಿಳುನಾಡಿನ ಬಾಳೆ ಬರುತ್ತಿದೆ. ಮೈಸೂರು, ಮಂಡ್ಯ, ಮದ್ದೂರು, ಬಾಳೆಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಇದೆ. ಶ್ರಾವಣ, ಪಂಚಮಿ ಹಬ್ಬದಿಂದ ದರ ಏರಿಕೆಯಾಗಿದೆ. ಅಮಾವಾಸ್ಯೆ, ದಸರಾ, ದೀಪಾವಳಿ ತನಕ ದರ ಕಡಿಮೆ ಆಗುವುದಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಔಷಧಿ ಸಿಂಪಡಿಸಿದ್ದರಿಂದ ಈರುಳ್ಳಿ ಬೆಳೆ ಹಾನಿ ಆರೋಪ: ಕಂಗಾಲಾದ ರೈತ - Onion crop damaged