ತಿರುವನಂತಪುರಂ (ಕೇರಳ): ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವು ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಹಲವು ಗಣ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಲಿವುಡ್ನ ಖ್ಯಾತ ನಟ ಮೋಹನ್ಲಾಲ್ ಅವರು ಕೂಡ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
ಇದಾದ ಬಳಿಕ ದೌರ್ಜನ್ಯ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇದು ಪರ- ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಹಿರಿಯ ನಟ ಅಧಿಕೃತ ಹೇಳಿಕೆ ನೀಡಿದ್ದು, ಸೂಕ್ತ ದಾಖಲೆಗಳು ಇದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ.
ಶನಿವಾರ ತಿರುವನಂತಪುರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿರುವುದು ಉತ್ತಮ ನಿರ್ಧಾರ. ನಟಿಯರಿಗೆ ಲೈಂಗಿಕ ಕಿರುಕುಳ ಪ್ರಕರಣಗಳು ಸಹಿಸಲಸಾಧ್ಯ. ವರದಿ ನೀಡಿದ ನ್ಯಾಯಮೂರ್ತಿ ಹೇಮಾ ಸಮಿತಿಯ ಕಾರ್ಯ ಶ್ಲಾಘನೀಯ. ಸೂಕ್ತ ಸಾಕ್ಷಿಗಳು ಇದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.
ಮಾಲಿವುಡ್ನಲ್ಲಿ ತಪ್ಪು ನಡೆದಿದ್ದರೆ ಮುಕ್ತ ಚರ್ಚೆಗೆ ಇದು ಅವಕಾಶವಾಗಿದೆ. ಇತರ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಸಮಿತಿಗಳನ್ನು ರಚಿಸಬೇಕು. ಹೇಮಾ ಸಮಿತಿಯು ಮಾದರಿಯಾಗಿದೆ. ಸದ್ಯದ ಆರೋಪಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತನಿಖೆಯ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಮೋಹನ್ ಲಾಲ್ ಅಭಿಪ್ರಾಯಪಟ್ಟರು.
ಅಮ್ಮ ಸಂಘಕ್ಕೆ ಸರ್ವಸಮ್ಮತಿ ಮೇರೆಗೆ ರಾಜೀನಾಮೆ ನೀಡಿದ್ದೇವೆ. ಮುಂಬರುವ ಸಿನಿಮಾದ ಕಾರಣ ನಾನು ರಾಜ್ಯದಲ್ಲಿ ಇರಲಿಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸುವುದು ಮಲಯಾಳಂ ಚಿತ್ರರಂಗಕ್ಕೆ ಬಿಟ್ಟದ್ದು. ಎಲ್ಲ ಸಮಸ್ಯೆಗಳಿಗೆ ಅಮ್ಮ ಸಂಘಟನೆಯನ್ನು ದೂಷಿಸಲಾಗುತ್ತಿದೆ. ಆದರೆ ಎಲ್ಲದಕ್ಕೂ ಸಂಘಟನೆಯು ಜವಾಬ್ದಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜೀನಾಮೆ ಸರಣಿ: ಕೇರಳ ಸರ್ಕಾರ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿದ ನಂತರ, ಹಲವಾರು ಮಹಿಳಾ ಕಲಾವಿದರು ತಾವು ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನೆಲೆ, ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮತ್ತೊಂದೆಡೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಟ ಸಿದ್ದಿಕ್ ಕೆಳಗಿಳಿದಿದ್ದರು.
ಇದಾದ ಬಳಿಕ ಮಲಯಾಳಂ ಚಲನಚಿತ್ರ ನಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ಲಾಲ್ ರಾಜೀನಾಮೆ ನೀಡಿದ್ದರು. ಇದರ ಜೊತೆಗೆ ಸಂಘದ ಇತರ ಪದಾಧಿಕಾರಿಗಳೂ ಆರೋಪಗಳ ನೈತಿಕ ಹೊಣೆ ಹೊತ್ತು ಹುದ್ದೆಯಿಂದ ಹಿಂದೆ ಸರಿದಿದ್ದರು.
ಇದನ್ನೂ ಓದಿ: 'ಅಮ್ಮ' ಅಧ್ಯಕ್ಷ ಸ್ಥಾನಕ್ಕೆ ಸೂಪರ್ಸ್ಟಾರ್ ಮೋಹನ್ ಲಾಲ್ ರಾಜೀನಾಮೆ - Actor Mohanlal Resigns