ಬೆಂಗಳೂರು : ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿತನನ್ನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಅತೀಕ್ ಅಹಮದ್ ಬಂಧಿತ ಆರೋಪಿ. ಪ್ರವೀಣ್ ಹತ್ಯೆ ಹಿಂದಿನ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಅತೀಕ್ ಅಹಮದ್‌ನನ್ನ ಪ್ರಕರಣದಲ್ಲಿ 21ನೇ ಆರೋಪಿ ಎಂದು ಗುರುತಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಾಯಕತ್ವದ ಅಡಿ ಕೆಲಸ ಮಾಡಿದ್ದ ಅತೀಕ್ ಅಹಮದ್, ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ. ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮುಸ್ತಫಾ ಫೈಚಾರ್ ಚೆನ್ನೈಗೆ ಪರಾರಿಯಾಗಲು ಅತೀಕ್ ಅಹಮದ್ ನೆರವಾಗಿದ್ದ. ಜನರಲ್ಲಿ ಭಯವುಂಟುಮಾಡಲು ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್‌ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆಯನ್ನ ಮುಸ್ತಫಾ ಪೈಚಾರ್ ಯೋಜಿಸಿ ಕಾರ್ಯಗತಗೊಳಿಸಿದ್ದ. ಮೇ 2024ರಲ್ಲಿ ಮುಸ್ತಫಾ ಪೈಚಾರ್‌ನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಮತ್ತು ಸದಸ್ಯರು ಹತ್ಯೆ ಮಾಡಿದ್ದರು. ಪ್ರಕರಣದ ಗಂಭೀರತೆ ಅರಿತ ಎನ್ಐಎ ಆಗಸ್ಟ್ 4ರಂದು ತನಿಖೆಯನ್ನ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಇದುವರೆಗೆ ತಲೆಮರೆಸಿಕೊಂಡಿರುವ 23 ಜನ ಆರೋಪಿತರ ವಿರುದ್ಧ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇನ್ನುಳಿಳಿದ ಆರು ಆರೋಪಿಗಳ ಪತ್ತೆಗಾಗಿ ಎನ್ಐಎ ಅಧಿಕಾರಿಗಳು ತಮ್ಮ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಲುಕ್ಔಟ್ ನೋಟಿಸ್ ಜಾರಿಯಾಗಿದ್ದ ಪ್ರಮುಖ ಆರೋಪಿ ಬಂಧನ - PRAVEEN NETTARU MURDER CASE