ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆ ಮತದಾನದ ದಿನಾಂಕ ಪರಿಷ್ಕರಿಸಲಾಗಿದೆ. ಈ ಮೊದಲು ಕೇಂದ್ರ ಚುನಾವಣಾ ಆಯೋಗ ಅಕ್ಟೋಬರ್ 1 ರಂದು ಮತದಾನ ನಡೆಸಲು ನಿರ್ಧರಿಸಿತ್ತು. ಇದಕ್ಕೆ ಅಕ್ಟೋಬರ್ 5ಕ್ಕೆ ಮತದಾನ ಮುಂದೂಡಲಾಗಿದೆ. ಅಕ್ಟೋಬರ್ 4ರ ಬದಲಿಗೆ 8 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಚುನಾವಣಾ ಆಯೋಗ, ಅಕ್ಟೋಬರ್ 1 ರಂದು ಗುರು ಜಂಬೇಶ್ವರರ ಸ್ಮರಣಾರ್ಥ ಅಸೋಜ್ ಅಮವಾಸ್ಯೆ ಆಚರಿಸಲಾಗುತ್ತದೆ. ಜಂಬೇಶ್ವರರು ಜನರ ಮೂಲ ದೈವವಾದ ಕಾರಣ, ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಅಂದು ಜನರು ಹಬ್ಬದಲ್ಲಿ ತೊಡಗಿಸಿಕೊಳ್ಳುವ ಕಾರಣ, ಮತದಾನಕ್ಕೆ ಅಡ್ಡಿಯಾಗಲಿದೆ. ಹೀಗಾಗಿ ದಿನಾಂಕ ಮುಂದೂಡಬೇಕು ಎಂದು ಬಿಷ್ಣೋಯ್ ಸಮುದಾಯ ಮನವಿ ಮಾಡಿತ್ತು.
Haryana Assembly polls now on Oct 5 instead of Oct 1 keeping in mind centuries-old festival of Bishnoi community. Counting for Jammu and Kashmir and Haryana Assembly polls now on Oct 8 in place of Oct 4: Election Commission pic.twitter.com/TBJ59BolWW
— Press Trust of India (@PTI_News) August 31, 2024
ಇದನ್ನು ಪರಿಗಣಿಸಿದ್ದ ಚುನಾವಣಾ ಆಯೋಗ, ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ದಿನಾಂಕ ಪರಿಷ್ಕರಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವ ಉದ್ದೇಶದಿಂದ ಮತದಾನದ ದಿನಾಂಕಗಳನ್ನು ಬದಲಾಯಿಸಲಾಗಿದೆ ಎಂದು ಎಂದು ಹೇಳಿಕೆ ನೀಡಿದೆ.
- ಅಧಿಸೂಚನೆ ಪ್ರಕಟ ದಿನಾಂಕ : ಸೆಪ್ಟೆಂಬರ್ 05
- ನಾಮಪತ್ರ ಸ್ವೀಕರಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 12
- ನಾಮಪತ್ರಗಳ ಪರಿಶೀಲನೆ: ಸೆಪ್ಟೆಂಬರ್ 13
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಸೆಪ್ಟೆಂಬರ್ 16
- ಮತದಾನ ದಿನಾಂಕ: ಅಕ್ಟೋಬರ್ 05
- ಫಲಿತಾಂಶ ಪ್ರಕಟ: ಅಕ್ಟೋಬರ್ 08
ಹರಿಯಾಣವು ಒಟ್ಟು 90 ಸದಸ್ಯ ಸ್ಥಾನಗಳನ್ನು ಹೊಂದಿದೆ. ಅವುಗಳಲ್ಲಿ 73 ಸಾಮಾನ್ಯ ಮತ್ತು 17 ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಮತದಾರರಿದ್ದಾರೆ. ಪ್ರಥಮ ಬಾರಿಗೆ 4.52 ಲಕ್ಷ ಮಂದಿ ಮತದಾನ ಮಾಡಲಿದ್ದಾರೆ ಎಂದು ಸಿಇಸಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ದುಷ್ಯಂತ್ ಸಿಂಗ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಕ್ಷ (ಜೆಜೆಪಿ)ದ ಮೈತ್ರಿಯಿಂದ ಅಧಿಕಾರ ಹಿಡಿದಿತ್ತು. ಇದಾದ ಬಳಿಕ ನಡೆದ ಬೆಳವಣಿಗೆಯಲ್ಲಿ ಜೆಜೆಪಿ ಮೈತ್ರಿ ಮುರಿದುಕೊಂಡಿತು. ಬಿಜೆಪಿ ಪಕ್ಷೇತರರ ನೆರವಿನಿಂದ ಸರ್ಕಾರ ಅಧಿಕಾರದಲ್ಲಿದೆ. ಹಾಲಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲು ಆಡಳಿತಾರೂಢ ಬಿಜೆಪಿ ಯೋಜಿಸಿದೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯನ್ನು ಈ ಬಾರಿ ಸೋಲಿಸಲೇಬೇಕೆಂದು ಕಾಂಗ್ರೆಸ್ ತಂತ್ರ ರೂಪಿಸಿದೆ.
ಮತ ಎಣಿಕೆಯೂ ಬದಲು: ಹರಿಯಾಣದ ಜೊತೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೂ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ 90 ಸ್ಥಾನಗಳಿಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆಗೆ ನಿರ್ಧರಿಸಲಾಗಿತ್ತು. ಆದರೆ, ಹರಿಯಾಣದ ಮತದಾನ ಮುಂದೂಡಲಾಗಿದ್ದು, ಅಕ್ಟೋಬರ್ 8 ರಂದು ಎರಡೂ ರಾಜ್ಯಗಳ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ: ಭದ್ರತೆಗೆ ಅರೆಸೇನಾಪಡೆ ತುಕಡಿಗಳ ನಿಯೋಜನೆ - Assembly Polls Security