ಹಾವೇರಿ: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಏಲಕ್ಕಿ ನಗರ ಹಾವೇರಿ ಬೀದಿಗಳೆಲ್ಲ ಈಗ ಗಣಪನದ್ದೇ ಸಂಭ್ರಮ. ಹಾವೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಿದ್ಧಪಡಿಸಲಾಗಿರುವ ಮಣ್ಣಿನ ಮೂರ್ತಿಗಳನ್ನು ವ್ಯಾಪಾರಿಗಳು ಹಾವೇರಿ ಮಾರುಕಟ್ಟೆಯ ಬೀದಿಗಳಿಗೆ ತರಲಾರಂಭಿಸಿದ್ದಾರೆ.
ನಗರದ ವೀರಭದ್ರೇಶ್ವರ ದೇವಸ್ಥಾನ, ಬಸವಣ್ಣ ದೇವರಗುಡಿ, ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಾರುಕಟ್ಟೆಯ ಪ್ರಮುಖ ರಸ್ತೆಯ ಮುಂದಿನ ಅಂಗಡಿಗಳಲ್ಲಿ, ಅಂಗಡಿಗಳ ಕಟ್ಟೆಗಳ ಮೇಲೆ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ.
ತರಹೇವಾರಿ ಮೂರ್ತಿಗಳು: ಹಾವೇರಿಗೆ ಪ್ರಮುಖವಾಗಿ ಸಮೀಪದ ದೇವಗಿರಿ ಗ್ರಾಮದ ಕಲಾವಿದರು ಸಾವಿರಾರು ಮೂರ್ತಿಗಳನ್ನು ತಂದಿದ್ದಾರೆ. ಇವುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮೂಷಿಕ, ನಂದಿ ಮೇಲೆ ಆಸೀನನಾದ ಗಣಪ ಸೇರಿದಂತೆ ಮಯೂರ, ಸಿಂಹ, ಕುದುರೆ, ಹಂಸ, ಹುಲಿ, ಆನೆ, ಕಮಲ, ಸಿಂಹಾಸನ, ನಾಗರ ಹಾವಿನ ಮೇಲೆ ಆಸೀನನಾದ ಗಣಪನನ್ನು ನಿರ್ಮಿಸಲಾಗಿದೆ. ಶಿವಾಜಿರೂಪದಲ್ಲಿ, ಸಾಯಿಬಾಬಾ, ಕೃಷ್ಣ, ರಾಮ ಸೇರಿದಂತೆ ವಿವಿಧ ವಿಷ್ಣುವಿನ ಅವತಾರಗಳಲ್ಲೂ ಮೂರ್ತಿಗಳನ್ನು ತಯಾರಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಉದ್ಘಾಟನೆಯಾದ ಶ್ರೀರಾಮ ಮಂದಿರದ ಪ್ರತಿಕೃತಿಯನ್ನು ಗಣೇಶನ ಹಿಂದೆ ನಿರ್ಮಿಸಲಾಗಿದೆ. ನಾಟ್ಯಗಣಪ, ಚರ್ಮಧಾರಿ ಗಣಪ, ಜಟಾಧಾರಿ ಗಣಪ, ಆಂಜನೇಯ ವೇಷಧಾರಿ ಗಣಪನ ಮೂರ್ತಿಗಳು ಭಕ್ತರನ್ನು ಸೆಳೆಯುತ್ತಿವೆ. ಆರು ಇಂಚಿನ ಗಣಪನಿಂದ ಹಿಡಿದು 10 ಅಡಿಯ ಮೂರ್ತಿಗಳನ್ನು ದೇವಗಿರಿ ಗ್ರಾಮದ ಕುಟುಂಬಗಳು ತಯಾರಿಸಿವೆ. ಈ ಎಲ್ಲ ಗಣಪನ ಮೂರ್ತಿಗಳು ಮಣ್ಣಿನಿಂದ ಮತ್ತು ಭತ್ತದ ಹುಲ್ಲಿನಿಂದ ತಯಾರಿಸಲ್ಪಟ್ಟಿದ್ದು, ಸಂಪೂರ್ಣ ಪರಿಸರಪ್ರೇಮಿ ಗಣಪ ಎನ್ನುವುದು ವಿಶೇಷ. ಈ ಮೂರ್ತಿಗಳಿಗೆ ಕಲಾವಿದರು ಪರಿಸರಪ್ರೇಮಿ ಬಣ್ಣಗಳನ್ನು ಅಂದರೆ ವಾಟರ್ ಪೈಂಟ್ ಬಳಸಿದ್ದಾರೆ.
"ಐದು ನೂರು ರೂಪಾಯಿಯಿಂದ ಹಿಡಿದು 80 ಸಾವಿರ ರೂಪಾಯಿವರೆಗೆ ಗಣೇಶನ ಮೂರ್ತಿಗಳು ಮಾರಾಟವಾಗುತ್ತಿವೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಭಕ್ತರು ತಮ್ಮ ನೆಚ್ಚಿನ ಗಣೇಶನ ಮೂರ್ತಿಗಳನ್ನು ಆಯ್ಕೆ ಮಾಡಿ ಹೆಸರು ಬರೆದುಹೋಗುತ್ತಿದ್ದಾರೆ. ದೇವಗಿರಿ ಗ್ರಾಮದ ಕಲಾವಿದರ ಗಣೇಶನ ಪ್ರಮುಖ ಆಕರ್ಷಣೆ ಗಂಧಲೇಪಿತ ಗಣೇಶನ ಮೂರ್ತಿಗಳು. ಈ ಕಲಾವಿದರು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಅದಕ್ಕೆ ಗಂಧ ಲೇಪಿಸುತ್ತಾರೆ. ಹೀಗಾಗಿ ಮೂರ್ತಿಗಳಿಗೆ ಭಾರೀ ಬೇಡಿಕೆ ಇದೆ. ಇನ್ನು ಸನಾತನ ಗಣೇಶ ಮೂರ್ತಿಗಳಿಗೆ ಮೊದಲಿನಿಂದಲೂ ಬೇಡಿಕೆ ಇದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಅಧಿಕವಾಗುತ್ತಿದೆ" ಎನ್ನುತ್ತಾರೆ ಕಲಾವಿದರು.
"ಒಂದು ತಿಂಗಳು ಮಾತ್ರವಲ್ಲ, ಉಳಿದ 11 ತಿಂಗಳು ಕೂಡ ಗಣೇಶನ ಮೂರ್ತಿಗಳನ್ನು ತಯಾರಿಸುವುದೇ ನಮ್ಮ ಕಾಯಕ. ಭಕ್ತರು ಕೇಳುವ ಮಾದರಿಯಲ್ಲಿ ಮೂರ್ತಿಗಳನ್ನು ತಯಾರಿಸಿ ತಯಾರಿಸಿ ಕೊಡುತ್ತೇವೆ. ಇತ್ತೀಚೆಗೆ ಪರಿಸರ ಪ್ರೇಮ ಹೆಚ್ಚಾಗುತ್ತಿದ್ದು, ಬಹುತೇಕ ಭಕ್ತರು ಇತ್ತ ಕಡೆ ವಾಲುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಸಂಪೂರ್ಣವಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ನಿಂತರೆ ಪರಿಸರಕ್ಕೆ ಹೆಚ್ಚು ಅನುಕೂಲಕರ" ಎಂದು ಕಲಾವಿದ ಶಂಭುಲಿಂಗಪ್ಪ ಬಡಿಗೇರ ಹೇಳಿದರು.