ಲಂಡನ್: ಏಕದಿನ ಕ್ರಿಕೆಟ್ನ ಇತಿಹಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಮೊದಲ ದ್ವಿಶತಕ ಸಿಡಿಸಿದ್ದರ ಬಗ್ಗೆ ಬೌಲರ್ರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಂಪೈರ್ ಕೃಪಕಟಾಕ್ಷದಿಂದ ಸಚಿನ್ ದ್ವಿಶತಕ ಸಿಡಿಸಿದ್ದರು ಎನ್ನುವ ಮೂಲಕ ದಕ್ಷಿಣ ಆಫ್ರಿಕಾದ ವೇಗಿ ಸ್ಟೈನ್ ಅಚ್ಚರಿ ಮೂಡಿಸಿದ್ದಾರೆ.
ಕ್ರಿಕೆಟ್ನ ಬ್ಯಾಟಿಂಗ್ ದಾಖಲೆಯ ಸಿಂಹಪಾಲನ್ನು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ನಲ್ಲಿ ದಾಖಲಾಗಿದ್ದ ಚೊಚ್ಚಲ ದ್ವಿಶತಕವಾಗಿತ್ತು.
ಆದರೆ ಹರಿಣಗಳ ವೇಗಿ ಡೇಲ್ ಸ್ಟೈನ್, "ಸಚಿನ್ ನಮ್ಮ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ್ದರು. ನನಗೆ ಇನ್ನೂ ನೆನೆಪಿದೆ, ಅವರು 190ರ ಆಸುಪಾಸಿನಲ್ಲಿದ್ದಾಗ ನನ್ನ ಓವರ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಆದ್ರೆ ಅಂಪೈರ್ ಇಯಾನ್ ಗೌಲ್ಡ್ ಔಟ್ ನೀಡಲಿಲ್ಲ" ಎಂದು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಜೊತೆ ನಡೆಸಿದ ಲೈವ್ ಸಂವಾದದಲ್ಲಿ ಈ ವಿಷಯ ತಿಳಿಸಿದ್ದಾರೆ.
ಅಂಪೈರ್ ಬಳಿ ತೆರಳಿ "ಏಕೆ ಔಟ್ ನೀಡಲಿಲ್ಲ? ಎಂದು ಕೇಳಿದೆ. ಅದಕ್ಕೆ ಅವರು, ಗೆಳೆಯ , ಸುತ್ತಲೂ ನೋಡು, ನಾನೇನಾದರು ಔಟ್ ನೀಡಿದರೆ, ನಾನು ಹೋಟೆಲ್ಗೆ ಹೋಗಲು ಸಾಧ್ಯವಿಲ್ಲ" ಎಂದು ಅಂಪೈರ್ ತಿಳಿಸಿದ್ದನ್ನು ಸ್ಮರಿಸಿದ್ದಾರೆ.
ಆದರೆ ಸ್ಟೈನ್ ಹೇಳಿದ ಮಾತು ಶುದ್ಧ ಸುಳ್ಳು ಎಂಬುದು ತಿಳಿದುಬಂದಿದೆ. ಹೇಗೆಂದರೆ ಸಚಿನ್ 190 ರನ್ ಗಳಿಸಿದ್ದ ವೇಳೆ ಅವರಿಗೆ ಸ್ಟೈನ್ ಮಾಡಿದ್ದು 3 ಎಸೆತ. ಆ ಮೂರು ಎಸೆತಗಳನ್ನು ಸಚಿನ್ ಬ್ಯಾಟ್ನಿಂದ ಟಚ್ ಮಾಡಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿದೆ. ಆದರೆ ಸ್ಟೈನ್ ಏಕೆ ಸುಳ್ಳು ಹೇಳಿದ್ದಾರೆ ಎಂದು ಅವರಿಂದಲೇ ಬಹಿರಂಗವಾಗಬೇಕಿದೆ.