ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಇತಿಹಾಸ ಸೃಷ್ಟಿಸಿದ್ದಾರೆ. ಟಿಟಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ವಿಶ್ವದ 18ನೇ ಶ್ರೇಯಾಂಕಿತೆ, ಫ್ರಾನ್ಸ್ನ ಆಟಗಾರ್ತಿ ಪ್ರೀತಿಕಾ ಪಾವೇಡೆ ವಿರುದ್ಧ 4-0 ಅಂತರದಿಂದ 29 ವರ್ಷದ ಮಣಿಕಾ ಬಾತ್ರಾ ಐತಿಹಾಸಿಕ ಜಯ ದಾಖಲಿಸಿದರು. ಪಂದ್ಯ ಆರಂಭದಿಂದ (11-9 11-6 11-9 11-7) ಕೊನೆಯವರೆಗೂ ಬಾತ್ರಾ ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆದರು.
HISTORY CREATED BY MANIKA BATRA 🤩
— The Khel India (@TheKhelIndia) July 29, 2024
First Indian Table Tennis player to reach Pre Quaterfinals of Olympic ever....!!!!! 🇮🇳♥️pic.twitter.com/TbWv353yx6
ಮೊದಲ ಸುತ್ತಿನಲ್ಲಿ ಫ್ರಾನ್ಸ್ನ 19 ವರ್ಷ ವಯಸ್ಸಿನ ಪ್ರೀತಿಕಾ ಅವರಿಂದ ಮಣಿಕಾ ಬಾತ್ರಾ ಪ್ರಬಲ ಪೈಪೋಟಿ ಎದುರಿಸಿದರು. ಆರಂಭದಲ್ಲಿ, 8-8ರಿಂದ ಸಮಬಲದ ಹೋರಾಟ ಕಂಡರು. ಬಳಿಕ ಅನುಭವಿ ಬಾತ್ರಾ ಒಲಿಂಪಿಕ್ಸ್ ಇತಿಹಾಸದಲ್ಲೇ ಟೇಬಲ್ ಟೆನ್ನಿಸ್ನಲ್ಲಿ ಭಾರತದ ಪರವಾಗಿ ಅತ್ಯಂತ ಸ್ಮರಣೀಯ ಪಂದ್ಯವಾಡಿದರು.
ಕಠಿಣ ಸವಾಲಿನ ನಡುವೆಯೇ ಮೊದಲ ಸುತ್ತಿನಲ್ಲಿ 11-9 ಅಂತರದಿಂದ ಬಾತ್ರಾ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ 3-1 ಅಂತರದ ಮುನ್ನಡೆ ಗಳಿಸಿದರು. ಮತ್ತೊಂದೆಡೆ, ಪ್ರೀತಿಕಾ ಸಮಬಲದ ಹೋರಾಟ ನೀಡಲು ನಿರಂತರವಾಗಿ ಪ್ರಯತ್ನಿಸಿದರು. ಆದರೆ ಅವರ ಸಣ್ಣಪುಟ್ಟ ತಪ್ಪುಗಳನ್ನೇ ಸಮರ್ಥವಾಗಿ ಬಳಸಿಕೊಂಡು ಬಾತ್ರಾ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು.
''ಇದೊಂದು ಕಠಿಣ ಪಂದ್ಯವಾಗಿತ್ತು. ಫ್ರೆಂಚ್ ಪಟುಯನ್ನು ಪ್ಯಾರಿಸ್‌ನಲ್ಲೇ ಸೋಲಿಸಿರುವುದಕ್ಕೆ ಸಂತೋಷವಾಗಿದೆ. ಉನ್ನತ ಶ್ರೇಣಿಯ ಆಟಗಾರ್ತಿಯನ್ನು ಸೋಲಿಸಿದ್ದೇನೆ. ಇತಿಹಾಸ ಸೃಷ್ಟಿಸಿ ಪ್ರೀ-ಕ್ವಾರ್ಟರ್ ತಲುಪುವ ಯೋಚನೆ ಮಾಡಿರಲಿಲ್ಲ. ಮುಂದೆ ಪಂದ್ಯದಿಂದ ಪಂದ್ಯಕ್ಕೆ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ'' ಎಂದು 28ನೇ ಶ್ರೇಯಾಂಕಿತ ಆಟಗಾರ್ತಿ ಮಣಿಕಾ ಬಾತ್ರಾ ತಿಳಿಸಿದರು.
Manika Batra (18) 4️⃣- 0️⃣ Prithika Pavade(12) 🇫🇷
— The Khel India (@TheKhelIndia) July 29, 2024
Manika absolutely dominated the game against higher ranked Prithika in France...!!! 🇮🇳♥️#Paris2024 #TableTennis https://t.co/GN0FljnoFK
ಪರಾಭವಗೊಂಡ ಪ್ರೀತಿಕಾ ಮೂಲ ಭಾರತ!: ಈ ಪಂದ್ಯದಲ್ಲಿ ಮಣಿಕಾ ಬಾತ್ರಾ ವಿರುದ್ಧ ಪರಾಭವಗೊಂಡ ಫ್ರಾನ್ಸ್ ಆಟಗಾರ್ತಿ ಪ್ರೀತಿಕಾ ಅವರ ಮೂಲ ಭಾರತ. ಇವರ ಪೋಷಕರು ಮೂಲತಃ ಪುದುಚೇರಿಯವರು. 2003ರಲ್ಲಿ ಇವರ ಪಾವೇಡೆ ಕುಟುಂಬ ಫ್ರಾನ್ಸ್‌ಗೆ ಸ್ಥಳಾಂತರಗೊಂಡಿತ್ತು. ಇದಾದ ಒಂದು ವರ್ಷದ ನಂತರ ಪ್ಯಾರಿಸ್ ಉಪನಗರದಲ್ಲಿ ಪ್ರೀತಿಕಾ ಜನಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಇವರು ಪಾಲ್ಗೊಂಡಿದ್ದರು. ಜೂನ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡಬ್ಲ್ಯೂಟಿಟಿ ಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ: ಬ್ಯಾಡ್ಮಿಂಟನ್: ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಿದ ಲಕ್ಷ್ಯ ಸೇನ್