ಧಾರವಾಡ: ಭಾರೀ ಮಳೆಯಿಂದ ನೆನೆದ ಗೋಡೆ ಕುಸಿದು ಕಳೆದ ಶುಕ್ರವಾರ ಮೃತಪಟ್ಟ ವೆಂಕಟಾಪೂರ ಗ್ರಾಮದ ಸಿದ್ದರ ಕಾಲೊನಿಯ ರೈತ ಯಲ್ಲಪ್ಪ ರಾಮಣ್ಣ ಹಿಪ್ಪಿ (48) ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೋಮವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಟೆಂಟ್ ಮೇಲೆ ಖಾಲಿ ಇರುವ ಪಕ್ಕದ ಮನೆ ಗೋಡೆ ಕುಸಿದು ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಹನುಮವ್ವ (38) ಹಾಗೂ ಮಗಳು ಯಲ್ಲವ್ವ(17) ಗಂಭೀರವಾಗಿ ಗಾಯಗೊಂಡಿದ್ದರು. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬ ಸದಸ್ಯರ ನೋವು ಆಲಿಸಿದ ಸಚಿವ ಲಾಡ್ ವೈಯಕ್ತಿಕವಾಗಿ 20,000 ಧನಸಹಾಯ ಮಾಡಿದರು.
ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಚಿವರು, "ಈಗಾಗಲೇ ಕುಟುಂಬಕ್ಕೆ ಸರ್ಕಾರದಿಂದಲೂ ಐದು ಲಕ್ಷ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 4 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ಸೇರಿ ಒಟ್ಟು 5 ಲಕ್ಷ ರೂ. ವಿತರಿಸಲಾಗಿದೆ. ಈ ಭಾಗದಲ್ಲಿ ತುಂಬಾ ಹಳೆಯ ಮನೆಗಳಿವೆ. ಹೀಗಾಗಿ ಅಲ್ಲಲ್ಲಿ ಸೋರುತ್ತಿರುವುದರಿಂದ ಪಕ್ಕದಲ್ಲೇ ಗಂಜಿ ಕೇಂದ್ರ ತೆರೆಯಲಾಗುವುದು. ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಬಿದ್ದ ಮನೆಯನ್ನು ಕಟ್ಟಿಸಿಕೊಡಲಾಗುತ್ತದೆ. ಮಳೆ ನಿಂತ ಬಳಿಕ ಸೋರುತ್ತಿರುವ ಮನೆಗಳನ್ನು ರಿಪೇರಿ ಮಾಡಿಕೊಂಡು ಮತ್ತೆ ಹೋಗಬಹುದು" ಎಂದರು.
ಮನೆ ಹಾನಿ ಪರಿಹಾರ ಮೊತ್ತ ತಗ್ಗಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, "ಆ ಸಮಯದಲ್ಲಿ ಕೆಲವೊಂದು ದುರುಪಯೋಗ ಆಗಿದೆ. ಅದರ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆಯೂ ಆಗಿದೆ. ಹೀಗಾಗಿ ಯಾವ ಕೆಟಗೇರಿ ಮಾಡಬೇಕು, ಎಷ್ಟೆಷ್ಟು ಪರಿಹಾರ ಕೊಡಬೇಕೆಂದು ಸಂಬಂಧಿಸಿದ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಗ್ರಾ.ಪಂ ಮಟ್ಟದಲ್ಲಿ ಶಿಥಿಲಗೊಂಡ ಮನೆಗಳ ಸರ್ವೆ ಕೂಡ ಮಾಡಿಸುತ್ತೇವೆ. ವೆಂಕಟಾಪುರ ಘಟನೆ ಮರುಕಳಿಸದಂತೆ ಮುನ್ನಚ್ಚರಿಕೆ ವಹಿಸಲಾಗುವುದು" ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಧಾರವಾಡ: ಟೆಂಟ್ ಮೇಲೆ ಪಕ್ಕದ ಮನೆ ಗೋಡೆ ಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ - House Wall Collapse