ಭಾರತದ ಸಂಸತ್ ಸದ್ಯ 543 ಸದಸ್ಯರನ್ನು ಒಳಗೊಂಡಿದೆ. ಅವರನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ಆಯ್ಕೆ ಮಾಡುತ್ತಾರೆ. ಪ್ರತಿಯೊಬ್ಬ ಸದಸ್ಯರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ. ಈ ಕ್ಷೇತ್ರಗಳು ಹೇಗೆ ಅಸ್ತಿತ್ವಕ್ಕೆ ಬಂದವು ಮತ್ತು ಅವುಗಳನ್ನು ದೇಶದಲ್ಲಿ ಹೇಗೆ ರಚನೆ ಮಾಡಲಾಗಿದೆ ಎಂಬುದು ಚರ್ಚೆಯ ವಿಷಯ. ಇವಕ್ಕೆ ಕೆಲವು ಸಾಂವಿಧಾನಿಕ ತತ್ವಗಳು ಕಡ್ಡಾಯವಾಗಿವೆ. ಕ್ಷೇತ್ರಗಳನ್ನು ರಚಿಸುವಾಗ ನಿಖರವಾದ ಅಂಶಗಳನ್ನು ಪರಿಗಣಿಸಬೇಕು.
ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿದ್ದೇಗೆ?: 2023 ರ ಸೆಪ್ಟೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದಂತೆ, 2024 ರ ಲೋಕಸಭಾ ಚುನಾವಣೆಯ ನಂತರ ದೇಶವು ಎರಡು ಪ್ರಮುಖ ಕಾರ್ಯಗಳಿಗೆ ಸಾಕ್ಷಿಯಾಗಲಿದೆ. ಮೊದಲು, ಜನಗಣತಿ ಎರಡನೆಯದು ಕ್ಷೇತ್ರಗಳ ಮರು ವಿಂಗಡಣೆ. ಡಿಲಿಮಿಟೇಶನ್ (ಕ್ಷೇತ್ರ ಮರುವಿಂಗಡಣೆ) ಎನ್ನುವುದು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿಗದಿಪಡಿಸುವ ಪ್ರಕ್ರಿಯೆ. ಶಾಸಕಾಂಗವನ್ನು ಪ್ರತಿನಿಧಿಸಲು ಪ್ರತಿನಿಧಿಗಳಿಗೆ ಮತ ಚಲಾಯಿಸುವ ಜನಸಂಖ್ಯೆಯು ಆ ಕ್ಷೇತ್ರದವರಾಗಿರುತ್ತಾರೆ. ಅಂದರೆ, ಕ್ಷೇತ್ರಗಳು ವಾಸ್ತವವಾಗಿ ನಿರ್ದಿಷ್ಟ ಸಂಸದರ ಆಯ್ಕೆ ಮಾಡುವ 'ಜನರ' ವ್ಯಾಪ್ತಿಯಾಗಿದೆ. ಕ್ಷೇತ್ರ ಮರುವಿಂಗಡಣೆ ಕಾರ್ಯವು ಸಂಸತ್ತ್ತಿನಲ್ಲಿ ಪ್ರತಿ ರಾಜ್ಯವು ಎಷ್ಟು ಪ್ರಾತಿನಿಧ್ಯ ಹೊಂದಿರಬೇಕು ಎಂಬುದನ್ನು ನಿರ್ಧರಿಸುತ್ತದೆ.
ಸರಳವಾಗಿ ಹೇಳುವುದಾದರೆ, ಡಿಲಿಮಿಟೇಶನ್ ಪ್ರಕ್ರಿಯೆ ಸಂಸತ್ ಮತ್ತು ವಿಧಾನಸಭೆ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಳವಾಗಲಿವೆ. ಪ್ರತಿ ರಾಜ್ಯವೂ ಇದನ್ನು ಪಡೆಯಲಿದೆ. ಇದರಿಂದ ಕ್ಷೇತ್ರಗಳ ಸಂಖ್ಯೆ ಮತ್ತು ಜನಸಂಖ್ಯೆಯ ನಡುವೆ ಸಮತೋಲನವನ್ನು ಸಾಧಿಸಲಾಗುತ್ತದೆ.
ಈ ಸಮತೋಲನ ಏಕೆ ಮುಖ್ಯ?: ಸಂವಿಧಾನದ ವಿಧಿ 81ರ ಪ್ರಕಾರ, ಪ್ರತಿ ರಾಜ್ಯವು ತನ್ನ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹೊಂದಿರಬೇಕು ಎಂದು ಸೂಚಿಸುತ್ತದೆ. ಸಮಾನ ಗಾತ್ರದಲ್ಲಿ ಕ್ಷೇತ್ರಗಳ ಹಂಚಿಕೆಯಾಗುತ್ತದೆ. ಜೊತೆಗೆ ಸಮಾನ ಮತದಾನವೂ ಹೊಂದಿರಲಿದೆ. ಅಂದರೆ, ಒಂದು ಕ್ಷೇತ್ರದಲ್ಲಿ ಇರುವ ಮತದಾರರ ಪ್ರಮಾಣ, ಮತ್ತೊಂದು ಕ್ಷೇತ್ರದಲ್ಲೂ ಅಷ್ಟೇ ಪ್ರಮಾಣದಲ್ಲಿ ಇರಬೇಕು. ಅಂದರೆ, ಸಂಸದರು ಸಮಾನ ಸಂಖ್ಯೆಯ ನಾಗರಿಕರನ್ನು ಪ್ರತಿನಿಧಿಸಬೇಕು ಎಂದು ಸಂವಿಧಾನದಲ್ಲಿ ಸೂಚಿಸಲಾಗಿದೆ.
ಈ ತತ್ವ ಅನುಸರಿಸದಿದ್ದಾಗ ಏನಾಗುತ್ತದೆ?: ಕ್ಷೇತ್ರಗಳ ಜನಸಂಖ್ಯೆಯಲ್ಲಿ ಹೆಚ್ಚು- ಕಡಿಮೆ ಉಂಟಾದರೆ, ಆಗ ಅದು 'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ತತ್ವ ಎಂದು ಕರೆಯಲಾಗುತ್ತದೆ. ಅಂದರೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಮತ್ತು ಕಾನೂನುಗಳನ್ನು ರಚಿಸುವಾಗ ಕಡಿಮೆ ಸಂಖ್ಯೆಯ ಮತದಾರರು ಹೆಚ್ಚು ಸಂಖ್ಯೆಯ ಮತದಾರರಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದಂತಾಗುತ್ತದೆ.
ಸಾಂವಿಧಾನಿಕ ನಿರೀಕ್ಷೆಗಳು ಮತ್ತು ರಾಜಕೀಯ ವಾಸ್ತವಗಳು: ಕ್ಷೇತ್ರ ಪುನರ್ವಿಂಗಡಣೆ ಕಾನೂನಿಗೆ ಅನುಸಾರವಾಗಿ ಈ ಡಿಲಿಮಿಟೇಶನ್ ನಡೆಯುತ್ತದೆ. ಈ ಕಾಯ್ದೆಯನ್ನು ಕ್ಷೇತ್ರಗಳ ಗಡಿಗಳನ್ನು ಮರುಹಂಚಿಕೆಗೆ ಮಾಡಬಹುದು ಎಂದು ಸಂಸತ್ತಿನಿಂದ ಅಂಗೀಕರಿಸಲ್ಪಟ್ಟಿದೆ. ಈ ಕಾಯಿದೆಯು ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಸ್ಥಾಪಿಸುತ್ತದೆ. ಇದು ಜನಗಣತಿಯ ಆಧಾರದ ಮೇಲೆ ಲೋಕಸಭೆ ಮತ್ತು ಶಾಸಕಾಂಗ ಸಭೆಗಳ ಕ್ಷೇತ್ರಗಳ ಗಡಿಗಳನ್ನು ಮರುವಿನ್ಯಾಸಗೊಳಿಸುತ್ತದೆ.
ಈ ಆಯೋಗವು ಶಾಶ್ವತ ಸಂಸ್ಥೆಯಲ್ಲ. ಡಿಲಿಮಿಟೇಶನ್ ಪ್ರಕ್ರಿಯೆ ನಡೆಯುವಷ್ಟು ಅವಧಿಗೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಇಲ್ಲಿಯವರೆಗೆ, 1952, 1962, 1972 ಮತ್ತು 2002 ರಲ್ಲಿ ಸೇರಿ ನಾಲ್ಕು ಡಿಲಿಮಿಟೇಶನ್ ಕಾಯಿದೆಗಳನ್ನು ಅಂಗೀಕರಿಸಲಾಗಿದೆ. 1972 ರ ಡಿಲಿಮಿಟೇಶನ್ ಆಯೋಗವು ಸಂಸತ್ತಿನಲ್ಲಿ 542 ಲೋಕಸಭಾ ಸ್ಥಾನಗಳನ್ನು ನಿಗದಿಪಡಿಸಿತ್ತು. ನಂತರ ಸಿಕ್ಕಿಂನ 1 ಸ್ಥಾನ ಸೇರಿಸಿ 543 ಕ್ಕೆ ಹೆಚ್ಚಿಸಲಾಯಿತು.
10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ನಂತರ ಜನಸಂಖ್ಯೆಯಲ್ಲಿ ಬದಲಾವಣೆಗಳ ಅನುಸಾರ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು. ಆ ಪ್ರಕಾರ, ಲೋಕಸಭೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಬೇಕು. ಆದರೆ, 1970ರ ನಂತರ ಲೋಕಸಭೆ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಏಕೆಂದರೆ 1976 ರಲ್ಲಿ, ಸಂವಿಧಾನದ 42 ನೇ ತಿದ್ದುಪಡಿಯು 1971 ರ ಜನಗಣತಿಯ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 2001 ರ ಜನಗಣತಿಯವರೆಗೆ ಮುಂದುವರಿಸಬೇಕು ಎಂದು ತಿಳಿಸಲಾಗಿತ್ತು.
ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿರುವ ಕಾರಣ, ಕ್ಷೇತ್ರಗಳ ಹೆಚ್ಚಳದ ಬಗ್ಗೆ ಈ ಭಾಗದ ರಾಜ್ಯಗಳು ಕಳವಳ ವ್ಯಕ್ತಪಡಿಸಿದ್ದವು. ಇದರ ನಿವಾರಣೆಗಾಗಿ ಸ್ಥಾನಗಳ ಹೆಚ್ಚಳವನ್ನು ತಡೆಹಿಡಿಯಲಾಗಿತ್ತು. 2001 ರಲ್ಲಿಯೂ ಇದೇ ತೆರನಾದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು 2026 ಕ್ಕೆ ಮುಂದೂಡಲಾಯಿತು. ಇದೀಗ ಆ ಗಡುವು ಸಮೀಪಿಸಿದೆ. ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಅಸ್ಸಾಂ, ಜಮ್ಮು ಮತ್ತು ಕಾಶ್ಮೀರದಂತಹ) ಕ್ಷೇತ್ರಗಳ ಮರುವಿಂಗಡಣೆ ಕೈಗೊಳ್ಳಲಾಗಿದ್ದರೂ, 2002 ರಿಂದ ದೇಶದಲ್ಲಿ ಡಿಲಿಮಿಟೇಶನ್ ನಡೆದಿಲ್ಲ.
ಡಿಲಿಮಿಟೇಶನ್ಗೆ ಇರುವ ತೊಡಕೇನು?: ಡಿಲಿಮಿಟೇಶನ್ಗೆ ಎರಡು ಸಾಂವಿಧಾನಿಕ ತೊಡಕುಗಳಿವೆ. ಒಕ್ಕೂಟ ವ್ಯವಸ್ಥೆ ಒಂದಾದರೆ, 'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ತತ್ವವು ಇದಕ್ಕೆ ವಿರುದ್ಧವಾಗಿದೆ. ಅಂದರೆ, ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಜನಸಂಖ್ಯೆಯು ವೇಗವಾಗಿದೆ. 2011 ರ ಜನಗಣತಿಯ ಜನಸಂಖ್ಯೆಯ ಅಂಕಿಅಂಶಗಳನ್ನು ಪರಿಗಣಿಸಿ ಮತ್ತು ಸೀಟು ಹಂಚಿಕೆಯ ಆಧಾರವಾಗಿ ಮಾಡಿದರೆ, ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಒಟ್ಟು 31 ಸ್ಥಾನಗಳನ್ನು ಕಳೆದುಕೊಳ್ಳಲಿವೆ. ಇತ್ತ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ 31 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಲಿವೆ. ಇದರಿಂದ ಉತ್ತರದ ರಾಜ್ಯಗಳಲ್ಲಿನ ಕ್ಷೇತ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಲಿವೆ. ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯ ಸಮತೋಲನ ಕಳೆದುಕೊಳ್ಳಲಿದೆ.
ಅಸಮ ಜನಸಂಖ್ಯೆಯ ಬೆಳವಣಿಗೆಯಿಂದ ಉತ್ತರ ಭಾರತದ ಜನಪ್ರತಿನಿಧಿಗಳ ಮತದ ಮೌಲ್ಯವು ದಕ್ಷಿಣ ಭಾರತದ ಪ್ರತಿನಿಧಿಗಳಿಗಿಂತ ತುಂಬಾ ಕಡಿಮೆ ಇದೆ. ಇದರರ್ಥ, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸತ್ ಸದಸ್ಯರು ದಕ್ಷಿಣ ಭಾರತದ ರಾಜ್ಯಗಳ ಸಂಸದರಿಗಿಂತ ಹೆಚ್ಚಿನ ಮತದಾರರನ್ನು ಪ್ರತಿನಿಧಿಸುತ್ತಾರೆ. ಸಂಖ್ಯೆಯಲ್ಲಿ ಹೇಳುವುದಾದರೆ, ಉತ್ತರ ಪ್ರದೇಶದ ಒಬ್ಬ ಲೋಕಸಭಾ ಸಂಸದ 25 ಲಕ್ಷ ಮತದಾರರನ್ನು ಪ್ರತಿನಿಧಿಸಿದರೆ, ತಮಿಳುನಾಡು ಮತ್ತು ಕೇರಳದಲ್ಲಿ ಈ ಸಂಖ್ಯೆ ಕ್ರಮವಾಗಿ 18 ಲಕ್ಷ ಮತ್ತು 17 ಲಕ್ಷದಷ್ಟಿದೆ.
ನಗರೀಕರಣ ಮತ್ತು ವಲಸೆಯು ಆಯಾ ರಾಜ್ಯದೊಳಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಂಖ್ಯೆಯಲ್ಲಿ ಭಾರೀ ಅಸಮಾನತೆಗೆ ಕಾರಣವಾಗಿದೆ. ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶಗಳಿಗೆ ಹೆಚ್ಚಿನ ಸ್ಥಾನಗಳು ಮತ್ತು ಕ್ಷೇತ್ರಗಳನ್ನು ಹಂಚಿಕೆ ಮಾಡದಿದ್ದರೆ, ಆ ಪ್ರದೇಶಗಳಲ್ಲಿನ ಮತದಾರರು ಗ್ರಾಮೀಣ ಭಾಗದ ಮತದಾರರಿಗಿಂತ ಕಡಿಮೆ ಮೌಲ್ಯ ಹೊಂದಲಿದ್ದಾರೆ.
ಎಚ್ಚರಿಕೆಯ ನಡೆ ಅಗತ್ಯ: ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ದೇಶದ ಪ್ರಜಾಪ್ರಭುತ್ವ ಮತ್ತು ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಬಲಪಡಿಸುತ್ತದೆ. 1976 ರಲ್ಲಿ ರಾಜ್ಯಗಳ ಜನಸಂಖ್ಯೆಯಲ್ಲಿನ ಅಸಮಾನತೆ ಕಾರಣಕ್ಕಾಗಿ ತಡೆಹಿಡಿಯಲಾಗಿದ್ದ ಡಿಲಿಮಿಟೇಶನ್ ಈಗಿನ ಅಗತ್ಯ ಎನಿಸುತ್ತಿಲ್ಲ. ಈಗಲೂ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಏರುಪೇರಾಗಿದೆ. ಆದಾಗ್ಯೂ ಮರುವಿಂಗಡಣೆ ನಡೆಯಬೇಕಿದೆ. ಈ ಪ್ರಕ್ರಿಯೆಯನ್ನು ಅತಿ ನಾಜೂಕಾಗಿ ನಡೆಸುವುದು ಆಡಳಿತ ಪಕ್ಷದ ಹೊಣೆಯಾಗಿದೆ.
ಇದನ್ನೂ ಓದಿ: ಒನ್ ನೇಷನ್ ಒನ್ ಎಲೆಕ್ಷನ್, ಡಿಲಿಮಿಟೇಶನ್ ವಿರುದ್ಧ ನಿರ್ಣಯ ಮಂಡಿಸಿದ ಸಿಎಂ ಸ್ಟಾಲಿನ್