ಚಾಮರಾಜನಗರ: ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ರವಿ, ಸಿದ್ದಶೆಟ್ಟಿ, ಸಿದ್ದರಾಜು, ಮಹೇಶ ಹಾಗೂ ಪಂಜನಹಳ್ಳಿ ಗ್ರಾಮದ ಸುರೇಶ ಬಂಧಿತರು. ಶಿವಪುರ - ಗುಂಡ್ಲುಪೇಟೆ ಮಾರ್ಗದ ಕಲ್ಲುಕಟ್ಟೆ ಡ್ಯಾಂ ಬಳಿ ಮೂರು ಬೈಕ್‍ಗಳಲ್ಲಿ ಬರುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಐವರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿತರು ಕಡಬೂರು - ಚಿರಕನಹಳ್ಳಿ ಗ್ರಾಮದ ಬಳಿಯ ಕೆರೆಯ ಸಮೀಪ ಜಿಂಕೆಯನ್ನು ಬಂದೂಕಿನಿಂದ ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು 40 ಕೆ.ಜಿ ಜಿಂಕೆ ಮಾಂಸ, ಒಂಟಿ ನಳಿಕೆ ನಾಡ ಬಂದೂಕು, ಕತ್ತಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಗುಂಡ್ಲುಪೇಟೆ ಬಫರ್ ವಲಯದಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಂಕೆಯ ಮಾಂಸವನ್ನು ನಿಯಮಾನುಸಾರ ವಿಲೇ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.