ಬಿಜ್ನೋರ್ (ಉತ್ತರಪ್ರದೇಶ) : ದಟ್ಟ ಮಂಜಿನಿಂದಾಗಿ ಧಾಂಪುರದ ಡೆಹ್ರಾಡೂನ್ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಿಯಂತ್ರಣ ತಪ್ಪಿದ ಕಾರೊಂದು ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಚಾಲಕ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಿಬ್ರಿ ಗ್ರಾಮದ ನಿವಾಸಿಯಾದ ಖುರ್ಷಿದ್ ತನ್ನ ಮಗ ವಿಶಾಲ್ ಮದುವೆಗೆ ಜಾರ್ಖಂಡ್‌ಗೆ ತೆರಳಿದ್ದರು ಎಂಬುದು ತಿಳಿದು ಬಂದಿದೆ. ಮದುವೆ ಮುಗಿಸಿಕೊಂಡು ಕುಟುಂಬಸ್ಥರಾದ ಖುರ್ಷಿದ್ (65), ಅವರ ಮಗ ವಿಶಾಲ್ (25), ಸೊಸೆ ಖುಷಿ (22) ಮತ್ತು ಮುಮ್ತಾಜ್ (45), ಪತ್ನಿ ರೂಬಿ (32) ಮತ್ತು ಮಗಳು ಬುಶ್ರಾ (10) ರೈಲಿನ ಮೂಲಕ ಬಂದು ಮೊರಾದಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಎಲ್ಲರೂ ಆಟೋದ ಮೂಲಕ ಹಳ್ಳಿಯ ಕಡೆಗೆ ಹೋಗುತ್ತಿದ್ದರು. ಈ ವೇಳೆ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.
ಈ ಬಗ್ಗೆ ಎಸ್ಪಿ ಅಭಿಷೇಕ್ ಝಾ ಮಾತನಾಡಿ, ''ಧಾಂಪುರ್‌ನ ಡೆಹ್ರಾಡೂನ್ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯ ನಗೀನಾ ಮಾರ್ಗದ ಅಗ್ನಿಶಾಮಕ ಠಾಣೆ ಬಳಿ ಹಿಂದಿನಿಂದ ಬಂದ ಕ್ರೆಟಾ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ತ್ರಿಚಕ್ರ ವಾಹನ ಹಳ್ಳಕ್ಕೆ ಬಿದ್ದಿದೆ. ಇದಾದ ಬಳಿಕ ಅಲ್ಲಿ ಕೂಗಾಟ ನಡೆದಿದೆ. ಅಲ್ಲಿಗೆ ಬಂದ ದಾರಿಹೋಕರು ಹಳ್ಳದಲ್ಲಿ ಬಿದ್ದಿದ್ದ ಗಾಯಾಳುಗಳಿಗೆ ಸಹಾಯ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ'' ಎಂದರು.
''ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯೆ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದಾದ ನಂತರ ಆಟೋ ಚಾಲಕ ಅಜಬ್ ಕೂಡ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಕಾರಿನಲ್ಲಿ ಸಿಲುಕಿದ್ದ ಶೆರ್ಕೋಟ್ ನಿವಾಸಿಗಳಾದ ಸೊಹೈಲ್ ಅಲ್ವಿ ಮತ್ತು ಅಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: 36 ಪ್ರಯಾಣಿಕರ ಸಾವು, ಪರಿಹಾರ ಘೋಷಣೆ