ಹೈದರಾಬಾದ್: ಗೂಗಲ್ ಮಾಲೀಕತ್ವದ ಯೂಟ್ಯೂಬ್ನಂತೆ ಸಾಮಾಜಿಕ ಜಾಲತಾಣ ಎಕ್ಸ್ (ಈ ಹಿಂದಿನ ಟ್ವಿಟರ್) ಫ್ಲಾಟ್ಫಾರ್ಮ್ ಶೀಘ್ರದಲ್ಲೇ ವಿಡಿಯೋ ಸ್ಟ್ರೀಮಿಂಗ್ ಸೇವೆ ಆರಂಭಿಸಲಿದೆ ಎಂದು ಎಲೋನ್ ಮಸ್ಕ್ ಶನಿವಾರ ಘೋಷಿಸಿದ್ದಾರೆ.
ಎಕ್ಸ್ ಅನ್ನು 'ಎವ್ರಿಥಿಂಗ್ ಆ್ಯಪ್' ಆಗಿ ಪರಿವರ್ತಿಸುವ ಪ್ರಯತ್ನದಲ್ಲಿ ಎಲೋನ್ ಮಸ್ಕ್, ನೇರವಾಗಿ ಯೂಟ್ಯೂಬ್ ಜೊತೆಗೆ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್ ಟಿವಿ ಪರದೆಗಳಲ್ಲಿ ದೀರ್ಘವಾದ ವಿಡಿಯೋಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಎಕ್ಸ್ ಸಂಸ್ಥೆಯು ಅಮೆಜಾನ್ ಹಾಗೂ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳಿಗಾಗಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದೆ. ಡಾಗ್ ಡಿಸೈನರ್ ಎಂಬ ಹೆಸರಿನ ಬಳಕೆದಾರರು ಎಕ್ಸ್ನಲ್ಲಿ ಹಾಕಿದ ಪೋಸ್ಟ್ಗೆ ಉತ್ತರಿಸಿರುವ ಎಲೋನ್ ಮಸ್ಕ್, ವಿಡಿಯೋ ಸ್ಟ್ರೀಮಿಂಗ್ ಸೇವೆ 'ಶೀಘ್ರದಲ್ಲೇ ಬರಲಿದೆ' ಎಂದು ಉತ್ತರಿಸಿದ್ದಾರೆ. ಬಳಕೆದಾರರು, "ನೀವು ಶೀಘ್ರದಲ್ಲೇ ನಿಮ್ಮ ಮೆಚ್ಚಿನ ಎಕ್ಸ್ನ ದೀರ್ಘವಾದ ವಿಡಿಯೋಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್ ಟಿವಿಗಳಲ್ಲಿ ವೀಕ್ಷಿಸಬಹುದು" ಎಂದು ಬರೆದಿದ್ದಾರೆ.
"ಜನರು ತಮ್ಮ ದೊಡ್ಡ ಪರದೆಯ ಟಿವಿಗಳಲ್ಲಿ ದೀರ್ಘವಾದ ವಿಡಿಯೋಗಳನ್ನು ಆರಾಮವಾಗಿ ವೀಕ್ಷಿಸಲು ಸಾಧ್ಯವಾಗಬೇಕು ಎಂದು ಬಯಸುತ್ತೇವೆ. ಈಗಾಗಲೇ ಜನರು ನಿಮ್ಮ ಫೋನ್ನಿಂದ ನಿಮ್ಮ ಟಿವಿಯಲ್ಲಿ ವಿಡಿಯೋಗಳನ್ನು ಪ್ಲೇ ಮಾಡಲು Apple AirPlay ಅನ್ನು ಬಳಸಬಹುದು" ಎಂದು ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ಫ್ಲಾಟ್ಫಾರ್ಮ್ ಆಗಿ ತನ್ನನ್ನು ಮರು ರೂಪಿಸಿಕೊಳ್ಳಲು ಹೊರಟಿರುವ ಎಕ್ಸ್ನ ನಡೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಅದರಲ್ಲೂ, ಡೊಮೇನ್ನಲ್ಲಿರುವ ಅತೀ ದೊಡ್ಡ ಪ್ರತಿ ಸ್ಪರ್ಧಿಯನ್ನು ಎಕ್ಸ್ ಹೇಗೆ ಎದುರಿಸುತ್ತದೆ ಎಂಬುದರ ಕುರಿತು ಧ್ವನಿ ಎತ್ತಿರುವ ಮಸ್ಕ್ನ ಫಾಲೋವರ್ಸ್ಗಳಲ್ಲಿ ಬಝ್ ಸೃಷ್ಟಿಸಿದೆ. ಕೆಲವು ಮಸ್ಕ್ ಅಭಿಮಾನಿಗಳಂತೂ ಈ ಸೇವೆಯಿಂದ ಎಕ್ಸ್ ಟೆಕ್ ದೈತ್ಯ ಯೂಟ್ಯೂಬ್ ಅನ್ನು ಹಿಂದಿಕ್ಕಲಿದೆ ಎಂದು ಕಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು, "ಎಕ್ಸ್ ನೇರವಾಗಿ ಯೂಟ್ಯೂಬ್ನೊಂದಿಗೆ ಸ್ಪರ್ಧಿಸುತ್ತಿರುವುದನ್ನು ನೋಡಲು ಸಂತೋಷವಾಗಿದೆ. ಎಕ್ಸ್ನ ಅತಿ ದೊಡ್ಡ ಮಾರಾಟದ ಅಂಶ ಎಂದರೆ ಅದು ಹೆಚ್ಚಿನ ಮಟ್ಟದ ವಾಕ್ ಸ್ವಾತಂತ್ರ್ಯ ಹೊಂದಿರುವ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಜನ ಸೆನ್ಸಾರ್ಶಿಪ್ ಅನ್ನು ಸಂಪೂರ್ಣವಾಗಿ ದ್ವೇಷಿಸುತ್ತಾರೆ. ವಾಕ್ ಸ್ವಾತಂತ್ರ್ಯ ಮಾನವ ಹಕ್ಕು" ಎಂದು ಬರೆದಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ, "ಈ ಅಪ್ಲಿಕೇಶನ್ ಅನ್ನು ಒಮ್ಮೆ ಆಳಿದ ಹಾಗೂ ಅದನ್ನು ಗ್ರೌಂಡ್ನಲ್ಲಿ ಓಡಿಸುತ್ತಿದ್ದ ದಬ್ಬಾಳಿಕೆ ಲಿಬ್ಗಳಿಂದ ದೂರವಿಟ್ಟಾಗಿನಿಂದ ಈ ಅಪ್ಲಿಕೇಶನ್ ಎಷ್ಟು ದೂರ ಬಂದಿದೆ ಎಂದು ನಂಬುವುದು ಕಷ್ಟ. ಎಕ್ಸ್ನ ಈ ಕ್ರಮವು ಅದರ ವೇದಿಕೆ ವೈವಿಧ್ಯಗೊಳಿಸುವ ಮತ್ತು ನಿರಂತರವಾಗಿ ವಿಕಸನಗೊಳಿಸುತ್ತಿರುವ ಡಿಜಿಟಲ್ ವಿಷಯದ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಇಟ್ಟಿರುವ ಕಾರ್ಯತಂತ್ರದ ಹೆಜ್ಜೆ" ಎಂದು ಮಸ್ಕ್ ಅನುಯಾಯಿ ಬರೆದಿದ್ದಾರೆ.
ಇತ್ತೀಚೆಗೆ ಎಕ್ಸ್, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ದೀರ್ಘರೂಪದ ಲಿಖಿತ ವಿಷಯ ಹಂಚಿಕೊಳ್ಳಲು ಆರ್ಟಿಕಲ್ಸ್ ಸೇವೆ ಪರಿಚಯಿಸಿತು. ಈಗ ದೀರ್ಘ ರೂಪದ ಬರವಣಿಗೆ, ಸ್ಮಾರ್ಟ್ ಟಿವಿಯಲ್ಲಿ ದೀರ್ಘವಾದ ವಿಡಿಯೋ ನೋಡುವ ಸೇವೆಯ ಜೊತೆಗೆ, ಸಾಮಾಜಿಕ ಮಾಧ್ಯಮ ನೆಟ್ವರ್ಕ್ ವಿಡಿಯೋ ಗೇಮ್ಗಳು ಹಾಗೂ ಪಾಡ್ಕಾಸ್ಟ್ಗಳನ್ನು ಪ್ರಾರಂಭಿಸುವ ಕುರಿತು ಅನ್ವೇಷಣೆ ನಡೆಸುತ್ತಿದೆ.
ಇದನ್ನೂ ಓದಿ: ಎಲಾನ್ ಮಸ್ಕ್ ಸಂಸ್ಥೆಯಲ್ಲಿ ಸಂಪೂರ್ಣ ನಿಯಂತ್ರಣ ಬಯಸಿದ್ದರು: ಓಪನ್ ಎಐ