SUZUKI ACCESS 125: ದ್ವಿಚಕ್ರ ವಾಹನ ತಯಾರಕ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಸುಜುಕಿ ಆಕ್ಸೆಸ್ 125 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ. ಈಗ ಕಂಪನಿಯು ಈ ಸ್ಕೂಟರ್‌ಗೆ ಸಂಬಂಧಿಸಿದಂತೆ ದೊಡ್ಡ ಸಾಧನೆಯೊಂದನ್ನು ಮಾಡಿದೆ. ಏಕೆಂದರೆ ಸುಜುಕಿ ಮೋಟಾರ್ ಸೈಕಲ್ ಈ ಸ್ಕೂಟರ್‌ನ 60 ಲಕ್ಷ ಯುನಿಟ್‌ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದೆ.
ಈ ಸಾಧನೆ ಕುರಿತು ಮಾತನಾಡಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಉಮೇಡಾ, ಸುಜುಕಿ ಆಕ್ಸೆಸ್ 125 ರ 6 ಮಿಲಿಯನ್ ಉತ್ಪಾದನೆಯು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದಲ್ಲಿ ನಮಗೆಲ್ಲರಿಗೂ ಮಹತ್ವದ ಕ್ಷಣವಾಗಿದೆ. ಇದು ನಮ್ಮ ಗ್ರಾಹಕರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಕ್ಸೆಸ್ 125 ನಲ್ಲಿ ತೋರಿಸಿದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಸುಜುಕಿ ಆಕ್ಸೆಸ್ 125 ದ್ವಿಚಕ್ರ ವಾಹನ ಉದ್ಯಮದಲ್ಲಿ ಜನಪ್ರಿಯತೆ ಗಳಿಸುತ್ತಲೇ ಇರುವುದರಿಂದ, ಪ್ರಪಂಚದಾದ್ಯಂತದ ಗ್ರಾಹಕರಿಗೆ ಸವಾರಿ ಅನುಭವ ಹೆಚ್ಚಿಸುವ ಉತ್ಪನ್ನಗಳನ್ನು ತಲುಪಿಸಲು ನಾವು ಎದುರು ನೋಡುತ್ತಿದ್ದೇವೆ.
ಸುಜುಕಿ ಆಕ್ಸೆಸ್ 125 ಪವರ್‌ಟ್ರೇನ್: ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ 2006 ರಲ್ಲಿ ಬಿಡುಗಡೆ ಮಾಡಲಾಯಿತು. ಕಂಪನಿಯು ಈ ಸ್ಕೂಟರ್, 125 ಸಿಸಿ ವಿಭಾಗದಲ್ಲಿ ಬಿಡುಗಡೆ ಮಾಡಿತ್ತು. ಸುಜುಕಿ ಮೋಟಾರ್‌ಸೈಕಲ್ ಈ ಸ್ಕೂಟರ್‌ನಲ್ಲಿ 124cc, ಸಿಂಗಲ್ ಸಿಲಿಂಡರ್ ಬಳಕೆ ಮಾಡಲಾಗಿದೆ. ಇದು 8.6 bhp ಪವರ್ ಮತ್ತು 10 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಸುಜುಕಿ ಆಕ್ಸೆಸ್ 125 ವೈಶಿಷ್ಟ್ಯಗಳು: ಅದರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ ಸ್ಕೂಟರ್ ಸುಜುಕಿ ಇಕೋ ಪರ್ಫಾರ್ಮೆನ್ಸ್ (ಎಸ್‌ಇಪಿ) ತಂತ್ರಜ್ಞಾನ, ಸುಧಾರಿತ ಇಂಧನ ಇಂಜೆಕ್ಷನ್ ಮತ್ತು ಇಕೋ ಅಸಿಸ್ಟ್ ಇಲ್ಯುಮಿನೇಟರ್‌ನೊಂದಿಗೆ ಬರುತ್ತದೆ. ಇದರ ಹೊರತಾಗಿ ಇದು 22.3 ಲೀಟರ್‌ನ ದೊಡ್ಡ ಅಂಡರ್-ಸೀಟ್ ಸ್ಟೋರೇಜ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್, ಲಾಂಗ್ ಸೀಟ್ ಮತ್ತು ಅಗಲವಾದ ಫ್ಲೋರ್‌ಬೋರ್ಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಕಾರ್ಯಕ್ಷಮತೆ, ಸೌಕರ್ಯ ಮತ್ತು ವೈಶಿಷ್ಟ್ಯಗಳ ಸಮತೋಲನವನ್ನು ನೀಡುತ್ತದೆ.
ಸುಜುಕಿ ಆಕ್ಸೆಸ್ 125 ಹಗುರವಾದ ಸ್ಕೂಟರ್ ಆಗಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು ಆರಾಮದಾಯಕ ಮತ್ತು ಮೋಜಿನ ಸವಾರಿಯನ್ನು ಒದಗಿಸುತ್ತದೆ. ಇದು ಮುಂಭಾಗದ ಸ್ಟೀಲ್ ಫೆಂಡರ್, ಒನ್-ಪುಶ್ ಸೆಂಟ್ರಲ್ ಲಾಕಿಂಗ್ ಮತ್ತು ಬ್ರೇಕಿಂಗ್ ಸಿಸ್ಟಮ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಇದು ದ್ವಿಚಕ್ರ ವಾಹನ ಸವಾರರಲ್ಲಿ ನೆಚ್ಚಿನ ಆಯ್ಕೆಯಾಗಿದೆ.
ಓದಿ: ಆಗಸದಲ್ಲಿ ಆಲಿಂಗನ ಪ್ರಕ್ರಿಯೆಗೆ ಕ್ಷಣಗಣನೆ ಶುರು, ಇಲ್ಲಿದೆ ಇಸ್ರೋದ ಸ್ಪ್ಯಾಡೆಕ್ಸ್ ಮಿಷನ್ನ ಇಂಚಿಂಚು ಮಾಹಿತಿ!